Thursday, November 21, 2024
Google search engine
HomeUncategorizedರೈತರ ಋಣದಲ್ಲಿ ದೇಶವಿದೆ ಎಂದಿದ್ದ ಪ್ರೊ.ನಂಜುಂಡಸ್ವಾಮಿ

ರೈತರ ಋಣದಲ್ಲಿ ದೇಶವಿದೆ ಎಂದಿದ್ದ ಪ್ರೊ.ನಂಜುಂಡಸ್ವಾಮಿ

ನಾಡಿನಲ್ಲಿ ಆದರ್ಶ ಕೃಷಿ ಸಮಾಜವನ್ನು ನಿರ್ಮಿಸಿದ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ರೈತ ಸಂಘಟನೆಗಳಿಗೆ ವಿಜ್ಞಾನ ಮತ್ತು ಕಾನೂನಿನ ಸ್ಪರ್ಶಕೊಟ್ಟರು ಎಂದು ದಾವಣಗೆರೆಯ ಹೊನ್ನಾಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ನಡೆದ ಕರ್ನಾಟಕ ರೈತ ಚಳವಳಿಯಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಯನ್ನು ವಾಣಿಜ್ಯೀಕರಣಗೊಳಿಸಿ, ಬೆಳೆ ವಿಮೆ ಮಾಡಿಸಿದರೆ ಯಾವ ರೈತನೂ ಆತ್ಮಹತ್ಯೆ ಮಾಡಿಕೊಳ್ಳವುದಿಲ್ಲ. ಸರ್ಕಾರಗಳು ರೈತರಿಗೆ ಉಚಿತ ಯೋಜನೆಗಳನ್ನು ಕೊಡುವ ಬದಲು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿಬೇಕು. ಬೆಳೆಗೆ ನೀರು, ಕೃಷಿ ಕಾರ್ಯಗಳಿಗೆ ವಿದ್ಯುತ್ ಸರಬರಾಜು ಮಾಡಿದರೆ ರೈತನ ಬೆಳೆ ಸಮೃದ್ಧವಾಗಿರುತ್ತದೆ ಎಂದು ಸರ್ಕಾರಗಳಿಗೆ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಮನವರಿಕೆ ಮಾಡಿಸಲು ಚಳವಳಿಗಳನ್ನು ಆಯೋಜಿಸುತ್ತಿದ್ದರು ಎಂದು ತಿಳಿಸಿದರು.

ಅನ್ನದಾತರ ದಾಸ್ಯ ಮತ್ತು ದಾರಿದ್ರ್ಯವನ್ನು ಬಿಡುಗಡೆಗೊಳಿಸಿದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ರೈತರ ಆತ್ಮದಧ್ವನಿ ಕೇಳಿದ ಮೊದಲಿಗ. ರೈತರ ಹೋರಾಟವನ್ನು ಒಪ್ಪದ ಭಾರತೀಯ ಸಮಾಜಕ್ಕೆ ಮನವರಿಕೆ ಮಾಡಿಸಲು, ಆಳುವ ವರ್ಗದವರ ದರ್ಪ, ಅಸಮಾನತೆಯನ್ನು ಹೋಗಲಾಡಿಸಲು ‘ರೈತರ ಋಣದಲ್ಲಿ ದೇಶವಿದೆ. ರೈತ ಸಾಲಗಾರನಲ್ಲ, ಸರ್ಕಾರ ಸಾಲಗಾರ’ ಎಂದು ವೇದಿಕೆಗಳಲ್ಲಿ ಗುಡುಗಿದ ಉಗ್ರ ಚಳವಳಿಯ ಸೌಮ್ಯ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಎಂದರು.

ರೈತರಿಗೆ ಸ್ವಾಭಿಮಾನದ ದೀಕ್ಷೆಯನ್ನು ನೀಡಿ, ಯುವಕರನ್ನು ಪರ್ಯಾಯ ರಾಜಕೀಯಕ್ಕೆ ಪರಿಚಯಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಪಾತ್ರ, ಶಬ್ದಗಳ ಪರಿಕಲ್ಪನೆಗಳನ್ನು ನೀಡಿ, ರಾಜ್ಯದ ಭವಿಷ್ಯಕ್ಕಾಗಿ ಎರಡನೇ ತಲೆಮಾರಿನ ನಾಯಕರನ್ನು ಸೃಷ್ಟಿಸಿ, ಮಹಿಳಾ ಸಬಲೀಕರಣಕ್ಕಾಗಿ ಹೋರಾಡಿದವರು ಪ್ರೊ. ಎಂ.ಡಿ. ನಂಜುಂಡಸ್ವಾಮಿ. ರಾಜಕೀಯದಲ್ಲಿ ಶೂದ್ರರು ಮುಂದಾಳತ್ವ ವಹಿಸಿದರೆ ರಾಜ್ಯದ ಅಭಿವೃದ್ಧಿ ಎಂಬ ಸಮಭಾವನೆಯನ್ನು ಹೊಂದಿದ್ದರು ಎಂದು ತಿಳಿಸಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಮಾತನಾಡಿದರು. ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್, ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜು, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಜಯಶೀಲ, ಪ್ರಾಧ್ಯಾಪಕ ವಿಲಾಸ್ ಎಂ.ಕದ್ರೋಳ್ಕರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular