ಉತ್ತಮ ಬದುಕು ಕಟ್ಟಿಕೊಳ್ಳಲು ನುಲಿಯ ಚಂದಯ್ಯನವರಂತಹ ಶಿವಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ತಿಳಿಸಿದರು.
ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಿತ ಮತ್ತು ದಮನಿತ ವರ್ಗಗಳ ಧ್ವನಿಯಾಗಿ ಗುರುತಿಸಿಕೊಂಡ ಶಿವ ಶರಣರ ಆದರ್ಶಗಳನ್ನು ಸಾಕಾರಗೊಳಿಸಲು ಎಲ್ಲರು ವಿದ್ಯಾವಂತರಾಗಬೇಕು. ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ, ತಮ್ಮ ಕಾಯಕ ನಿಷ್ಠೆಗೆ ಗುರುತಾಗಿದ್ದ ನುಲಿಯ ಚಂದಯ್ಯನವರ ತತ್ವಾದರ್ಶಗಳು ತಳ ಸಮುದಾಯಗಳಿಗೆ ಮಾರ್ಗದರ್ಶಕವಾಗಿದ್ದು, ತಳ ಸಮುದಾಯಗಳು ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ ಎಂದು ಹೇಳಿದರು.
ಸಮಾಜದ ಮುಖ್ಯವಾಹಿನಿಗೆ ಬಾರದೆ ಹಿಂದುಳಿದಿರುವ ಸಮುದಾಯಗಳ ಅಸ್ಮಿತೆ ಶಿವ ಶರಣರು, ಶಿವ ಶರಣರಿಗಿದ್ದ ವೃತ್ತಿ ಗೌರವವನ್ನು ನಾವೂ ಸಹ ಬೆಳೆಸಿಕೊಳ್ಳಬೇಕು. ಪ್ರಜಾ ಪ್ರಭುತ್ವದ ಕಾಲಘಟ್ಟದಲ್ಲಿ ಜೀವನ ಸಾಗಿಸುತ್ತಿರುವ ನಾವು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವೃತ್ತಿ, ಜಾತಿ, ಧರ್ಮಗಳ ಕೀಳರಿಮೆಯಿಂದ ಹೊರಗೆ ಬಂದು ಸಾಧನೆ ಮಾಡಬೇಕು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕೊತ್ತಗೆರೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಾದ ಮಧುಗಿರಿ ತಾಲೂಕು ಬೇಡತ್ತೂರಿನ ಜಗದೀಶ್, ತುಮಕೂರಿನ ಜಾನಪದ ಕಲಾವಿದ ಹನುಮಂತರಾಯಪ್ಪ, ಕೊರಟಗೆರೆ ತಾಲೂಕು ಯಾದಗೆರೆಯ ಮಂಗಳವಾದ್ಯ ಕಲಾವಿದ ನಾಗರಾಜು, ಹರಿಕಥೆ ದಾಸ ದೊಡ್ಡಸಾರಂಗಿಯ ಮಂಜುನಾಥ್ ಹಾಗೂ ಕುಣಿಗಲ್‌ನ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಭಾರತೀಯ ಆಹಾರ ಅಭಿವೃದ್ಧಿ ನಿಗಮದ ಸದಸ್ಯ ಸೊಗಡು ವೆಂಕಟೇಶ್, ಜಿಲ್ಲಾ ಕುಳುವ ಮಹಾಸಂಘದ ಅಧ್ಯಕ್ಷ ಲೋಕೇಶ್ ಸ್ವಾಮಿ ಬಿ.ಆರ್. ಅಖಿಲ, ಕರ್ನಾಟಕ ಕುಳುವ ಮಹಾಸಂಘದ ಅಧ್ಯಕ್ಷ ಶಿವಾನಂದ ಭಜಂತ್ರಿ, ಮಾಜಿ ಶಿವರಾಮ್ ಹೆಬ್ಬೂರು ಶ್ರೀನಿವಾಸ್ ಮೂರ್ತಿ ಇತರರು ಇದ್ದರು.