ಖಾಸಗಿ ಶಾಲಾ ವಾಹನಕ್ಕೆ ಗುದ್ದಿ ಬೈಕ್ ಸವಾರ ಅಪ್ರಾಪ್ತ ಬಾಲಕ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿರುವ ಬಾಲಕನನ್ನು ತೇಜಸ್ ಎಂದು ಗುರುತಿಸಲಾಗಿದೆ.
ಗುಬ್ಬಿ ಪಟ್ಟಣದ ವಿನಾಯಕ ನಗರದ ರಸ್ತೆಯಲ್ಲಿ ಶುಭೋದಯ ಶಾಲಾ ವಾಹನ ತೆರಳುತ್ತಿತ್ತು.ಈ ಸಂದರ್ಭದಲ್ಲಿ 14 ವರ್ಷದ ಬಾಲಕ ತೇಜಸ್ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಸಂಬಂಧ ಸರ್ಕಲ್ ಇನ್ಸ್ ಪೆಕ್ಟರ್್ ಗೋಪಿನಾಥ್ ಮಾತನಾಡಿ, ಅಪ್ರಾಪ್ತ ಮಕ್ಕಳಿಗೆ ಪೋಷಕರು ವಾಹನಗಳನ್ನು ನೀಡುವುದು ಕಾನೂನುಬಾಹಿರವಾಗಿದೆ. ಹಾಗಾಗಿ ವಾಹನ ಚಾಲನೆಗೆ ಅವಕಾಶ ಮಾಡಿಕೊಟ್ಟ ವಾಹನ ಮಾಲಿಕರ ಮೇಲೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದು ಸಾವಿಗೀಡಾದ ಬಾಲಕನನ್ನು ತೆಗೆದುಕೊಂಡು ಹೋಗಿ ಗುಬ್ಬಿಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.