ಮೂಡಿಗೆರೆ ವಿಧಾನಸಭಾ ಕ್ಷೇತ್ರವನ್ನು ಅತಿವೃಷ್ಟಿ ಪ್ರದೇಶದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಮ್ಮದೇ ಸರ್ಕಾರದ ವಿರುದ್ಧ ವಿಧಾನಸೌಧದ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ಗಾಂಧಿ ಪ್ರತಿಮೆ ಎದುರು ಬಿತ್ತಪತ್ರವೊಂದನ್ನು ಹಿಡಿದು ಧರಣಿ ನಡೆಸಿ ಮೂಡಿಗೆರೆ ಕ್ಷೇತ್ರವನ್ನು ಎನ್ ಡಿ ಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ಇಡೀ ಕ್ಷೇತ್ರದಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡಿರುವ, ಜಮೀನು ಮತ್ತು ಬೆಳೆ ಹಾನಿ ಆಗಿರುವ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜನರ ಹಾಗೂ ಕ್ಷೇತ್ರದ ಅಭಿವೃದ್ಧಿ ಪರವಾದ ನನ್ನ ಹೋರಾಟ ನಿತ್ಯ ನಿರಂತರ ಎಂದು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.
ಎಂ.ಪಿ ಕುಮಾರಸ್ವಾಮಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಒಮ್ಮೆಯೂ ಪ್ರತಿಭಟನೆ, ಧರಣಿಗೆ ಇಳಿದಿರಲಿಲ್ಲ. ಮೊದಲ ಬಾರಿಗೆ ಮೌನ ಮುರಿದು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಬಹಿರಂಗವಾಗಿ ಧರಣಿ ನಡೆಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಂದು ದಿನವೂ ಮೌನ ಮುರಿದಿರಲಿಲ್ಲ. ಖಾತೆಗೆ ಕ್ಯಾತೆ ನಡೆಯುತ್ತಿರುವ ಸಂದರ್ಭದಲ್ಲೇ ಎಂ.ಪಿ.ಕುಮಾರಸ್ವಾಮಿ ಅವರು ಕೂಡ ಧರಣಿ ನಡೆಸಿ ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯುವಂತಹ ಕೆಲಸ ಮಾಡಿದ್ದಾರೆ.