Thursday, September 19, 2024
Google search engine
Homeಮುಖಪುಟಮೇಕೆದಾಟು ಯೋಜನೆ ಬಿಜೆಪಿ ದ್ವಂದ್ವ ನಿಲುವು - ಸಿಎಂ ಸ್ಪಷ್ಟೀಕರಣಕ್ಕೆ ಸಿದ್ದರಾಮಯ್ಯ ಆಗ್ರಹ

ಮೇಕೆದಾಟು ಯೋಜನೆ ಬಿಜೆಪಿ ದ್ವಂದ್ವ ನಿಲುವು – ಸಿಎಂ ಸ್ಪಷ್ಟೀಕರಣಕ್ಕೆ ಸಿದ್ದರಾಮಯ್ಯ ಆಗ್ರಹ

ಬಿಜೆಪಿ ಮೇಕೆದಾಟು ಯೋಜನೆಯ ಕುರಿತು ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ. ತಮಿಳುನಾಡು ಬಿಜೆಪಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ. ಈ ನಿಲುವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥಿಸುತ್ತಾರೆ. ಹಾಗಾಗಿ ಮುಖ್ಯಮಂತ್ರಿಗಳು ಈ ಸಂಬಂಧ ಸ್ಪಷ್ಟ ನಿಲುವೇನೆಂಬುದನ್ನು ಖಚಿತಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಮೇಕೆದಾಟು ಬಗ್ಗೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ತಳೆದಿರುವ ನಿಲುವಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಆದರೆ ತಮ್ಮ ಸಡಿಲ ನಾಲಿಗೆಯ ಮೂಲಕ ಒಂದಲ್ಲಾ ಒಂದು ವಿವಾದ ಸೃಷ್ಟಿಸುತ್ತಿರುವ ಸಿ.ಟಿ.ರವಿ ಅವರಂತಹ ಕೂಗು ಮಾರಿಗಳ ಬಾಯಿ ಮುಚ್ಚಿಸದೇ ಹೋದರೆ ನಾವು ನಾವೇ ಕಚ್ಚಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಕುವೆಂಪು ಕವನದ ನಿಲುವುಗಳೇ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ. ಕಾಂಗ್ರೆಸ್ ಪಕ್ಷ ಇದನ್ನು ನಂಬಿದೆ. ಈ ಬಗ್ಗೆ ರಾಜ್ಯದ ಬಿಜೆಪಿಗೆ ಭಿನ್ನಾಭಿಪ್ರಾಯ ಿದ್ದರೆ ಅದನ್ನು ಸ್ಪಷ್ಟಪಡಿಸಬೇಕು. ನಾವೂ ಕೂಡ ಭಾರತೀಯರು. ಇದಕ್ಕಾಗಿ ರಾಜ್ಯದ ಹಿತದೃಷ್ಟಿಯನ್ನು ಕಡೆಗಣಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ್ಧಾರೆ.

ನೆಲ-ಜಲ-ಭಾಷೆ ವಿಷಯದಲ್ಲಿ ನಮ್ಮ ಪಕ್ಷ ರಾಜಕೀಯವನ್ನಾಗಲೀ, ರಾಜಿಯನ್ನಾಗಲೀ ಮಾಡುವುದಿಲ್ಲ. ಅಧಿಕಾರ ಇರಲಿ, ಇಲ್ಲದಿರಲೀ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಮೇಕೆದಾಟು ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ಪಕ್ಷದೊಳಗೆ ಒಡಕು ಬಾಯಿಗಳನ್ನು ಮುಚ್ಚಿಸಬೇಕು ಎಂದು ಸಿ.ಟಿ. ರವಿ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಾವೇರಿ ಜಲವಿವಾದ ಇತ್ಯರ್ಥವಾಗಿದೆ. ಪ್ರಕೃತಿಯ ಕೃಪೆಯಿಂದ ಕಳೆದೆರಡು ವರ್ಷಗಳಲ್ಲಿ ತಮಿಳುನಾಡಿಗೆ ಅದರ ಪಾಲಿನ ನೀರು ಹರಿದು ಹೋಗುತ್ತಿದೆ. ಈ ಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುವುದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಎಸ್ ಜಲಾಶಯದಿಂದ ಅನಿಯಂತ್ರಿತವಾಗಿ ಸಮುದ್ರಕ್ಕೆ ಹರಿದುಹೋಗುತ್ತಿರುವ ನೀರಿನಲ್ಲಿ 64 ಟಿಎಂಸಿ ನೀರನ್ನು ಬಳಸಿಕೊಂಡು ರೂಪಿಸಲಾಗಿರುವ ಮೇಕೆದಾಟು ಯೋಜನೆಯ ಮೊದಲ ಪ್ರಸ್ತಾವವವನ್ನು 2013ರಲ್ಲಿ ನಮ್ಮ ಸರ್ಕಾರ ಸಲ್ಲಿಸಿತ್ತು. 2019ರಲ್ಲಿ ನಮ್ಮದೇ ಸಂಯುಕ್ತ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ನಮ್ಮ ಪಕ್ಷ ಈ ಯೋಜನೆಗೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಕೆದಾಟು ಮೂಲಭೂತವಾಗಿ ಬೆಂಗಳೂರು-ಮೈಸೂರು ನಗರಗಳಿಗಾಗಿ ರೂಪಿಸಿರುವ ಕುಡಿಯುವ ನೀರಿನ ಯೋಜನೆ .ಬೆಂಗಳೂರಿನಲ್ಲಿ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು ಭಾಷಿಕರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಜನರಿದ್ದಾರೆ. ಇಂತಹ ಕುಡಿಯುವ ನೀರು ಪೂರೈಸುವ ಯೋಜನೆಗೆ ತಮಿಳುನಾಡು ವಿರೋಧ ಸಲ್ಲದು ಎಂದು ಸಿದ್ದರಾಮಯ್ಯ ಸರಣಿ ಟ್ವೀಟ್ ಗಳಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular