Thursday, November 21, 2024
Google search engine
Homeಜಿಲ್ಲೆಆ.12ರಂದು ಕರ್ನಾಟಕ ಬ್ಯಾಂಕ್ ವಿರುದ್ಧ ಪ್ರತಿಭಟನೆ

ಆ.12ರಂದು ಕರ್ನಾಟಕ ಬ್ಯಾಂಕ್ ವಿರುದ್ಧ ಪ್ರತಿಭಟನೆ

ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದ ಕರ್ನಾಟಕ ಬ್ಯಾಂಕ್‌ನವರು ರೈತರೊಬ್ಬರು ಟ್ರಾಕ್ಟರ್ ಸಾಲಕ್ಕಾಗಿ ಅಡವಿಟ್ಟ 6.10 ಗುಂಟೆ ಜಮೀನನ್ನು ಒಟಿಎಸ್‌ಗೆ ಅವಕಾಶ ನೀಡದೆ ಈ ಟೆಂಡರ್ ಮೂಲಕ ಅತಿ ಕಡಿಮೆ ಬೆಲೆಗೆ ಹರಾಜು ಮಾಡಿ,ರೈತರನ್ನು ಬೀದಿಗೆ ತಳ್ಳಲು ಹೊರಟಿರುವ ಕ್ರಮವನ್ನು ವಿರೋಧಿಸಿ ಆಗಸ್ಟ್ 12 ಬ್ಯಾಂಕಿನ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ತುಮಕೂರು ವಿಜ್ಞಾನ ಕೇಂದ್ರದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005ರಲ್ಲಿ ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ನಾಗರಾಜು ಎಂಬುವವರು ಟ್ರಾಕ್ಟರ್‌ಗಾಗಿ ತುರುವೇಕೆರೆ ಕರ್ನಾಟಕ ಬ್ಯಾಂಕಿನಿಂದ 4.50 ಲಕ್ಷದ ಸಾಲ ಪಡೆದಿದ್ದು, ಕಟ್ಟಲು ಸಾಧ್ಯವಾಗಿರಲಿಲ್ಲ. ಈಗ ಬ್ಯಾಂಕಿನವರು ಸಾಲದ ಮೇಲಿನ ಬಡ್ಡಿ, ಚಕ್ರ ಬಡ್ಡಿ ಸೇರಿಸಿ 34.80 ಲಕ್ಷ ರೂ ಬಾಕಿ ತೋರಿಸಿ, ಓಟಿಎಸ್‌ಗೂ ಅವಕಾಶ ನೀಡದೆ, ನ್ಯಾಯಾಲಯದ ಡಿಕ್ರಿ ಪ್ರಕಾರ ಈ ಟೆಂಡರ್ ಮೂಲಕ ಮೂರು ಕೋಟಿಗೆ ಹೋಗುವ ಆಸ್ತಿಯನ್ನು ಕೇವಲ 35.40 ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ. ಕೇಂದ್ರದ ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ರೈತರ ಭೂಮಿಯನ್ನು ಈ ಹರಾಜು ಮಾಡಿರುವುದು ಸರಿಯಲ್ಲ.ಇದು ಆರ್.ಬಿ.ಐ ನಿಯಮಗಳಿಗೆ ವಿರುದ್ದವಾದ ನಡೆಯಾಗಿದೆ. ಅಲ್ಲದೆ ರೈತವಿರೋಧಿ ನಡೆಯಾಗಿದೆ.ಹಾಗಾಗಿ ಆಗಸ್ಟ್ 12 ರಂದು ಬ್ಯಾಂಕಿನ ಮುಂದೆ ಬೃಹತ್ ಹೋರಾಟ ನಡಸಲಾಗುತ್ತಿದೆ ಎಂದರು.

ರೈತ ವಿರೋಧಿ ಕರ್ನಾಟಕ ಬ್ಯಾಂಕಿನ ವಿರುದ್ದದ ಈ ಬೃಹತ್ ರೈತ ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ್ಚ, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಎ.ಗೋವಿಂದರಾಜು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರ್ಫೇಸಿ ಕಾಯ್ದೆಯ ವ್ಯಾಪ್ತಿಯಿಂದ ಕೃಷಿ ಭೂಮಿಯನ್ನು ಕೈಬಿಡುವಂತೆ ಈಗಾಗಲೇ ಹಲವಾರು ಬಾರಿ ಕೇಂದ್ರ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುತ್ತಿದೆ. ಆದರೆ ಸರ್ಕಾರ ಕಿವಿಗೊಟ್ಟಿಲ್ಲ. ರೈತರ ಸಾಲಮನ್ನಾ ಮಾಡಿ ಎಂದರೂ ಗಮನಹರಿಸುತ್ತಿಲ್ಲ. ಬದಲಿಗೆ 2014 ರಿಂದ ಇಲ್ಲಿಯವರೆಗೆ ಉದ್ದಿಮೆದಾರರ 20.40 ಲಕ್ಷ ಕೋಟಿ ರೂ ಸಾಲವನ್ನು ರೈಟ್‌ಅಫ್ ಹೆಸರಿನಲ್ಲಿ ಮನ್ನಾ ಮಾಡಿ, ತನ್ನ ರೈತವಿರೋಧಿ ನೀತಿಯನ್ನು ತೋರಿಸಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಶ್ರೀನಿವಾಸ್, ತಿಮ್ಮೇಗೌಡ, ಶಬ್ಬೀರ್ ಪಾಷ, ಅಸ್ಲಾಂಪಾಷ, ಮಹೇಶ್, ರಾಮಚಂದ್ರಪ್ಪ, ಈಶ್ವರಣ್ಣ, ರಾಜು.ಡಿ.ಕೆ. ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular