ತುಮಕೂರು ಏಷ್ಯಾದಲ್ಲಿ ಅತಿ ಹೆಚ್ಚು ದೊಡ್ಡ ಕೈಗಾರಿಕಾ ಪ್ರದೇಶವನ್ನು ಒಳಗೊಂಡಿರುವ ಜಿಲ್ಲೆಯಾಗಿದ್ದು ಗ್ರೇಟರ್ ಬೆಂಗಳೂರು ಆಗಿ ಬೆಳೆಯುತ್ತಿರುವ ನಗರವಾಗಿದೆ. ಇಂತಹ ನಗರದಲ್ಲಿ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಹೀಗಾಗಿ ತುಮಕೂರಿನಲ್ಲಿ ಹೂಡಿಕೆ ಮಾಡಲು ಕಂಪನಿಗಳು ಹಿಂಜರಿಯುತ್ತಿವೆ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಟಿ.ಜೆ. ಗಿರೀಶ್ ಆರೋಪಿಸಿದ್ದಾರೆ.
ಈ ಸಂಬಂಧ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ ಮನವಿ ಸಲ್ಲಿಸಿರುವ ಕೈಗಾರಿಕೋದ್ಯಮಿಗಳು, ಪ್ರತಿನಿತ್ಯ 300ಕ್ಕೂ ಹೆಚ್ಚು ಟ್ರಕ್ಕುಗಳು ಭಾರೀ ಭಾರವನ್ನು ಹೊತ್ತು ಸಂಚರಿಸುತ್ತಿವೆ. ಆದರೆ ರಸ್ತೆಗಳ ಅವ್ಯವಸ್ಥೆಯಿಂದ ಕೂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ ಸರಿಯಾದ ಒಳಚರಂಡಿ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೈಗಾರಿಕಾ ಪ್ರದೇಶಗಳಲ್ಲಿ ಸೂಕ್ತವಾದ ಒಳಚರಂಡಿ ವ್ಯವಸ್ಥೆಯನ್ನು ಹೊಂದಿಲ್ಲದೆ ಇರುವುದರಿಂದ ಎಲ್ಲಾ ನೀರು ಹೆದ್ದಾರಿಗೆ ಹರಿದು ಬರುತ್ತಿದೆ ಇದರಿಂದಾಗಿ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸದ ನಿಮಿತ್ತ ಹೋಗುವವರು, ಬರುವವರು ಹಾಗೂ ಸುಗಮವಾದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಆರೋಪಿಸಿದ್ದಾರೆ.
ಕೈಗಾರಿಕಾ ಪ್ರದೇಶದ ಒಳಗಡೆ ರಸ್ತೆಗಳು ಸರಿ ಇಲ್ಲ ಭಾರಿ ಸರಕನ್ನು ಹೊತ್ತು ವಾಹನ ಚಾಲನೆ ಮಾಡುವಾಗ ಮಳೆಗಾಲದಲ್ಲಿ ನೆಲ ಕುಸಿಯುತಿದೆ. ವಿಪ್ರೊ ಕಾರ್ಖಾನೆಯಿಂದ ಬಾಲರಾಮೇಶ್ವರ ರೈಸ್ ಮಿಲ್ ವರೆಗೆ ಸರ್ವಿಸ್ ರಸ್ತೆಗಳನ್ನು ಅತಿ ಶೀಘ್ರವಾಗಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕೈಗಾರಿಕಾ ಪ್ರದೇಶದ ಒಳಗೆ ಓಡಾಡುವ ಕಾರ್ಮಿಕರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಕೈಗಾರಿಕಾ ಪ್ರದೇಶದ ಒಳಗಡೆ ಇರುವ ಒಳ ಚರಂಡಿಯನ್ನು ಸ್ವಚ್ಛಗೊಳಿಸಿ ಮರು ನಿರ್ಮಾಣ ಮಾಡಬೆಕು. ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಓಡಾಡಲು ಹಾಗೂ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಬೀದಿ ದೀಪಗಳನ್ನು ದುರಸ್ತಿಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಕೈಗಾರಿಕಾ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಪ್ರತ್ಯೇಕವಾದ ಕೆಐಎಡಿಬಿ ಕಚೇರಿ, ಇಎಸ್‌ಐ ಮೆಡಿಕಲ್ ಡಿಸ್ಪೆನ್ಸರಿ, ಅಗ್ನಿಶಾಮಕ ಉಪಠಾಣೆ, ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ, ಬೆಸ್ಕಾಂ ಲೈನ್ ಮ್ಯಾನ್ ಕಚೇರಿ, ಬ್ಯಾಂಕುಗಳ ಸ್ಥಾಪನೆ ಹಾಗೂ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕು ಎಂದು ಈ ಮೇಲ್ಕಂಡ ಎಲ್ಲಾ ಕೈಗಾರಿಕಾ ಪ್ರದೇಶಗಳ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕೆಂದು ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಟಿ.ಜೆ. ಗಿರೀಶ್ ಆಗ್ರಹಿಸಿದ್ದಾರೆ.