ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್ ಹಸಿರುನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಕಚೇರಿಯಲ್ಲಿ ಆ ಭಾಗದ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿದರು. ಮೂರು ಪಾಲಿಕೆಗಳ ಚುನಾವಣೆಗೆ ಸಿದ್ದತೆ ನಡೆಸಲು ಸ್ಥಳೀಯ ಮುಖಂಡರಿಗೆ ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಚುನಾವಣೆಗೆ ಮಾನಸಿಕವಾಗಿ ಸಿದ್ದರಾಗಬೇಕು. ಮೂರು ಪಾಲಿಕೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಆಡಳಿತ ಪಕ್ಷದ ಮೇಲೆ ಜನರಿಗೆ ಬೇಸರ ತರಿಸಿದೆ. ಹಾಗಾಗಿ ಇಂತಹ ಸನ್ನಿವೇಶದ ಲಾಭವನ್ನು ಪಡೆಯಲು ಪಕ್ಷದ ಮುಖಂಡರು, ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದರು.
ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಮುಂದೂಡಲು ಯತ್ನಿಸುತ್ತಿದೆ. ಆಡಳಿತ ಪಕ್ಷ ಬೆಂಗಳೂರಿನಲ್ಲಿ ಬಿಜೆಪಿ ಪಕ್ಷದ ಸ್ಥಿತಿಗತಿ ಹೇಗಿದೆ ಎಂಬ ಬಗ್ಗೆ ಸರ್ವೇ ಮಾಡಿಸಿದೆ. ಸರ್ವೇಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇಲ್ಲ ಎಂಬ ಮಾಹಿತಿ ಸರ್ಕಾರಕ್ಕೆ ಸಿಕ್ಕಿದೆ. ಈ ಕಾರಣಕ್ಕಾಗಿಯೇ ಬಿಬಿಎಂ ಚುನಾವಣೆ ಮುಂದೂಡಿಕೆಗೆ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನ ಸಭಾ ಕ್ಷೇತ್ರಗಳು ಬರುತ್ತವೆ. 198 ವಾರ್ಡ್ ಗಳು ಇವೆ. ರಾಜ್ಯ ಸರ್ಕಾರ ತನಗೆ ಬೇಕಾದಂತೆ ಮೀಸಲಾತಿ ಮಾಡಿಕೊಂಡಿದೆ. ಸೋಲುವ ಭೀತಿಯಿಂದ ಹೀಗೆ ಮಾಡುತ್ತಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಎಲ್ಲಾ ವಾರ್ಡ್ ಗಳಲ್ಲೂ ಮನೆಮನೆಗೆ ಭೇಟಿ ನೀಡಿ ಜನರ ಗಮನ ಸೆಳೆಯಬೇಕು ಎಂದರು.
ಬಿಬಿಎಂಪಿ ಚುನಾವಣೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದವರಿಗೆ ಟಿಕೆಟ್ ನೀಡಲಾಗುವುದು. ಯಾವ ವಾರ್ಡ್ ಗೆ ಯಾವುದೇ ಮೀಸಲಾತಿ ಬರಲಿ. ಸ್ಥಳೀಯ ಮುಖಂಡರು ದೃತಿಗೆಡದೆ ಕೆಲಸ ಮಾಡಬೇಕು. ಸ್ವಾತಂತ್ರ್ಯ ದಿನದಂದು ತಮ್ಮ ವಾರ್ಡ್ ಗಳಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಸನ್ಮಾನಿಸಬೇಕು. ಇಂತಹ ಕೆಲಸದಿಂದ ಜನರ ಮನಸ್ಸನ್ನು ಗೆಲ್ಲಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮೊದಲಾದವರು ಇದ್ದರು.