ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಮೊದಲು 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಆಗಸ್ಟ್ 23ರಿಂದ ದಿನ ಬಿಟ್ಟು ದಿನ ತರಗತಿಗಳನ್ನು ಗುಂಪುವಾರು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು ನಗರದ ಜಿಲ್ಲಾ ಪಂಚಾಯತ್‍ನ ಸಭಾಂಗಣದ ಕೋವಿಡ್-19 ನಿಯಂತ್ರಣ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 1-8ರವರೆಗಿನ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸುವ ಕುರಿತು ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
ಕೋವಿಡ್-19ರ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಮೊದಲಿಗೆ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ನಡೆಸುತ್ತೇವೆ. ಅದೂ ದಿನ ಬಿಟ್ಟು ದಿನ ತರಗತಿಗಳು ಇರುತ್ತವೆ. ಬ್ಯಾಚ್ ವೈಸ್ ವಿದ್ಯಾರ್ಥಿಗಳಿಗೆ ಬೋಧಿಸುವಂತೆ ಉದ್ದೇಶಿಸಲಾಗಿದೆ ಎಂದು ಸ್ಪಷ್ಪಪಡಿಸಿದರು.
ಈ ನಡುವೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕೊರೊನ ಸೋಂಕು ಪರಿಸ್ಥಿತಿಯನ್ನು ನೋಡಿಕೊಂಡು ತರಗತಿಗಳನ್ನು ಆರಂಭಿಸಬೇಕೇ ಬೇಡವೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಸೂಕ್ತ ಪರಿಸ್ಥಿತಿ ಇದ್ದರೆ ಮಾತ್ರ ತರಗತಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನ ಸೋಂಕಿನ ಮೂರನೇ ಅಲೆಯು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.