ತುಮಕೂರು ನಗರದ ಜೆಸಿ ರಸ್ತೆಯಲ್ಲಿರುವ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ಮಾಲ್ ನಿರ್ಮಾಣ ಸಂಬಂಧ ಬಿಜೆಪಿ ಮೂರು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ ಮತ್ತು ಬಿಜೆಪಿಯ ಮೂರು ಸುಳ್ಳು ಆರೋಪಗಳು ಯಾವುದು ಎಂಬುದನ್ನು ಬಯಲುಗೊಳಿಸಿದೆ.
ಮಾಲ್ ನಿರ್ಮಾಣದ ಎಲ್ಲ ಪ್ರಕ್ರಿಯೆಗಳು ನಡೆದಿರುವುದು ಶಾಸಕ ಜ್ಯೋತಿ ಗಣೇಶ್ ಮತ್ತು ಸಂಸದ ಜಿ.ಎಸ್.ಬಸವರಾಜು ಕಾಲದಲ್ಲೇ ಎಂಬುದನ್ನು ಬೊಟ್ಟು ಮಾಡಿರುವ ಕಾಂಗ್ರೆಸ್ ಭಾರತೀಯ ಜನತಾ ಪಕ್ಷದ ಮುಖಂಡರು ಜನರ ನಡುವೆ ಹೇಗೆ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.
ಬಿಜೆಪಿಯ ಸುಳ್ಳು-1
ತುಮಕೂರಿನ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ಯುಟಿಲಿಟಿ ಮಾಲ್ ನಿರ್ಮಾಣವಾದರೆ ಅಲ್ಲಿನ ಬೀದಿಬದಿ ಹಣ್ಣು, ತರಕಾರಿ ಮಾರುವ ವ್ಯಾಪಾರಿಗಳ ಕುಟುಂಬ ಬೀದಿಗೆ ಬರುತ್ತದೆ ಎಂದು ಬಿಜೆಪಿ ಮಾಡುತ್ತಿರುವ ಮೊದಲ ಆರೋಪ.
ಅಸಲೀ ಸತ್ಯ:
ಈ ಯೋಜನೆ ಅನುಷ್ಠಾನದಿಂದ ಸುತ್ತಮುತ್ತಲಿನ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಹಾಗೂ ಜೆ.ಸಿ.ರಸ್ತೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ 120 ಬೀದಿಬದಿ ವ್ಯಾಪಾರಿಗಳೀಗೆ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಡಲಾಗುತ್ತದೆ. ಇದರಿಂದ ಬೀದಿಬದಿ ವ್ಯಾಪಾರಿಗಳಿಗೆ ಸಹಾಯವಾಗಲಿದೆ.
ಬಿಜೆಪಿಯ ಸುಳ್ಳು-2
ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಖಾಸಗಿಯವರಿಗೆ ಮಾರಲಾಗಿದೆ
ಅಸಲೀ ಸತ್ಯ:
ಸದರಿ ಸಿದ್ದಿ ವಿನಾಯಕ ಮಾರುಕಟ್ಟೆ ಪ್ರದೇಶವನ್ನು ಯೋಜನೆ ಅನುಷ್ಠಾನಪಡಿಸುವುದಕ್ಕೆ ಮಾತ್ರವೇ ಹಸ್ತಾಂತರಿಸಲಾಗಿದ್ದು, ಮಾಲೀಕತ್ವವನ್ನು ನೀಡಲಾಗಿರುವುದಿಲ್ಲ. ಜೊತೆಗೆ ಈ ಆಸ್ತಿಯನ್ನು ಯಾವುದೇ ವ್ಯಕ್ತಿ ಹಣಕಾಸು ಸಂಸ್ಥೆ ಮತ್ತು ಬ್ಯಾಂಕಿಗೆ ಪರಭಾರೆ ಮಾಡುವಂತಿಲ್ಲ ಎಂಬ ಷರತ್ತಿನ ಮೇಲೆ 30 ವರ್ಷಗಳ ಕಾಲಾವಧಿಗೆ ಗುತ್ತಿಗೆ ನೀಡಲಾಗಿರುತ್ತದೆ.
ಬಿಜೆಪಿಯ ಸುಳ್ಳು-3
ಸಿದ್ದಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಯುಟಿಲಿಟಿ ಮಾಲ್ ನಿರ್ಮಾಣ ಮಾಡುವ ಗುತ್ತಿಗೆಯನ್ನು ಇಂದಿನ ಕಾಂಗ್ರೆಸ್ ಸರ್ಕಾರ ಮುಸಲ್ಮಾನ ಗುತ್ತಿಗೆದಾರರಿಗೆ ನೀಡಿದೆ!
ಅಸಲೀ ಸತ್ಯ:
ಮೊದಲು ಮತ್ತು ಎರಡನೇ ಬಾರಿ ಯಾವುದೇ ಗುತ್ತಿಗೆದಾರರು ಭಾಗವಹಿಸಿರುವುದಿಲ್ಲ. ದಿನಾಂಕ 05-12-2021ರಂದು ಮೂರನೇ ಬಾರಿಗೆ ಏಕೈಕ ಬಿಡ್ಡನ್ನು ಸಲ್ಲಿಸಿ ಒಕ್ಕೂಟ ಸಂಸ್ಥೆಯೊಂದು ಗುತ್ತಿಗೆ ಪಡೆದಿರುತ್ತದೆ. ಈ ಒಕ್ಕೂಟ ಸಂಸ್ಥೆ ಗುತ್ತಿಗೆ ಪಡೆದಿರುವುದು ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಾಗಿರುತ್ತದೆ.
ಇದರ ಜೊತೆಗೆ ಸಿದ್ದಿವಿನಾಯಕ ಮಾರುಕಟ್ಟೆ ಜಾಗದಲ್ಲಿ ಮಾಲ್ ಕಟ್ಟಲು ಅನುಮತಿ ನೀಡಿದಾಗ ಶಾಸಕರಾಗಿದ್ದವರು ಜ್ಯೋತಿಗಣೇಶ್. ಅಲ್ಲದೆ ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ಮಾಲ್ ನಿರ್ಮಾಣಕ್ಕೆ ಹೈಕೋರ್ಟ್ ಆದೇಶ ನೀಡಿದಾಗ ಅಂದು ತುಮಕೂರಿನಲ್ಲಿ ಸಂಸದರಾಗಿದ್ದವರು ಬಿಜೆಪಿಯ ಜಿ.ಎಸ್.ಬಸವರಾಜ್. ಸಿದ್ದಿವಿನಾಯಕ ಮಾರುಕಟ್ಟೆಯಲ್ಲಿ ಮಾಲ್ ನಿರ್ಮಾಣ ಮಾಡಲು ಸ್ಮಾರ್ಟ್ ಸಿಟಿ ಅನುಮತಿ ನೀಡಿದಾಗ ಸ್ಮಾರ್ಟ್ ಸಿಟಿ ಸದಸ್ಯರಾಗಿದ್ದವರು ಶಾಸಕ ಜ್ಯೋತಿಗಣೇಶ್. ಆದರೆ ಆರೋಪ ಮಾಡುವುದು ಕಾಂಗ್ರೆಸ್ ಮೇಲೆ ಎಂದು ಹೇಳಲಾಗುತ್ತಿದೆ.