ತುಮಕೂರು ನಗರದ ಜೆ.ಸಿ.ರಸ್ತೆಯಲ್ಲಿದ್ದ ಸಿದ್ಧಿವಿನಾಯಕ ತರಕಾರಿ, ಹೂವು ಮತ್ತು ಹಣ್ಣು ಮಾರುಕಟ್ಟೆ ಪ್ರದೇಶದಲ್ಲಿ ಮಾಲ್ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಸಣ್ಣಪುಟ್ಟ ವ್ಯಾಪಾರಿಗಳು ಸ್ಥಳದಲ್ಲಿ ಪ್ರತಿಭಟನೆ ಮಾಡಿದರು. ಇಲ್ಲಿ ಮಾಲ್ ನಿರ್ಮಾಣ ಮಾಡಿದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾವು ಕೆಲ ದಶಕಗಳಿಂದ ಇಲ್ಲೇ ವ್ಯಾಪಾರ ವಹಿವಾಟು ಮಾಡಿಕೊಂಡು ಬರುತ್ತಿದ್ದೇವೆ, ಈ ಹಿಂದೆ ಮಾರುಕಟ್ಟೆಯಲ್ಲಿ ನಾವು ವ್ಯಾಪಾರ ಮಾಡುತ್ತಿದ್ದೆವು, ಆದರೆ ಈ ಮಾರುಕಟ್ಟೆಯನ್ನು ಮಧುಗಿರಿ ರಸ್ತೆಗೆ ಸ್ಥಳಾಂತರ ಮಾಡಿದ ಮೇಲೆ ಕೆಲವರು ಅಲ್ಲಿಗೆ ಹೋದರು. ಆದರೂ ನಾವು ಇಲ್ಲೇ ಚರಂಡಿಯ ಮೇಲೆ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ನಾವು ಬಡವರು, ಅವರು ಕೇಳಿದಷ್ಟು ಹಣ ಕೊಡಲು ಶಕ್ತಿಯಿಲ್ಲ. ಹಾಗಾಗಿ ಈ ಜಾಗದಲ್ಲಿ ಕೆಲ ದಶಕಗಳಿಂದ ಚರಂಡಿ ಮೇಲೆ, ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ, ಜೊತೆಗೆ ನಮಗೆ ಇದೇ ಆಧಾರ ಇದೀಗ ಇದನ್ನೂ ಸಹ ಕಿತ್ತುಕೊಳ್ಳಲು ಈ ಸರ್ಕಾರ ಮುಂದಾಗಿದ್ದು ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಇಲ್ಲೇ ಜಾಗ ನೀಡಿ, ನಾವು ಸರ್ಕಾರಕ್ಕೆ ಬಾಡಿಗೆ ಪಾವತಿ ಮಾಡಿಕೊಂಡು ಹೋಗಲು ಬದ್ಧರಾಗಿದ್ದೇವೆ, ಇಲ್ಲಿ ಮಾಲ್ ನಿರ್ಮಾಣವಾದರೆ ನಮ್ಮ ಮತ್ತು ನಮ್ಮ ಅವಲಂಬಿತರು ಬೀದಿಗೆ ಬರುತ್ತಾರೆ ಎಂದು ನೊಂದು ನುಡಿದರು.