Tuesday, December 3, 2024
Google search engine
Homeಮುಖಪುಟಡಿಸಿಸಿ ಸೇರಿ ಎಲ್ಲಾ ಬ್ಲಾಕ್ ಸಮಿತಿಗಳ ವಿಸರ್ಜನೆ -ಡಿಕೆ ಶಿವಕುಮಾರ್

ಡಿಸಿಸಿ ಸೇರಿ ಎಲ್ಲಾ ಬ್ಲಾಕ್ ಸಮಿತಿಗಳ ವಿಸರ್ಜನೆ -ಡಿಕೆ ಶಿವಕುಮಾರ್

ರಾಜ್ಯದ ಎಲ್ಲಾ ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳನ್ನು ವಿಸರ್ಜಿಸಿ ಹೊಸ ಸಮಿತಿಗಳನ್ನು ರಚಿಸಲಾಗುವುದು. ಈಗಾಗಲೇ ಹೊಸ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು ಕ್ರಿಯಾಶೀಲರಾಗಿ ಕೆಲಸ ಮಾಡದವರನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ಕಚೇರಿಗಳಿಗೆ ಬಂದು ಹೋಗುವ, ಬೇರೆ ಮುಖಂಡರ ಬೆಂಬಲವಿದೆಯೆಂದು ಓಡಾಡುವ ಪದಾಧಿಕಾರಿಗಳನ್ನು ಈಗಿರುವ ಹುದ್ದೆಯಲ್ಲಿ ಮುಂದುವರಿಸುವುದಿಲ್ಲ. ಅವರ ಬದಲಿಗೆ ಕ್ರಿಯಾಶೀಲವಾಗಿ ಕೆಲಸ ಮಾಡುವ ಯುವ ಮುಂದಾಳುಗಳನ್ನು ಸಮಿತಿಗಳಿಗೆ ನೇಮಕ ಮಾಡುತ್ತೇವೆ. ಜೊತೆಗೆ ಈಗ ಕ್ರಿಯಾಶೀಲವಾಗಿರುವ ಸಮಿತಿ ಪದಾಧಿಕಾರಿಗಳನ್ನು ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಹೊಸಹೊಸ ವಿಭಾಗಗಳನ್ನು ಸಂಪರ್ಕಿಸಲು ಸಹ ಸಿದ್ದತೆ ಮಾಡಿದ್ದೇವೆ. ಯುವಕ-ಯುವತಿಯರನ್ನು ಸೆಳೆಯಲು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಇಡೀ ವರ್ಷಪೂರಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪಕ್ಷವನ್ನು ಸಂಘಟಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಎಲ್ಲಾ ಸಮಿತಿಗಳು ಸಿದ್ದತೆ ಮಾಡಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಇರುವ ಸಮಿತಿಗಳನ್ನು ಪುನರ್ ರಚಿಸಬೇಕು. ಒಬಿಸಿ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಮಹಿಳಾ ಘಟಕಗಳನ್ನು ಕ್ರಿಯಾಶೀಲಗೊಳಿಸಲು ಕ್ರಮ ವಹಿಸಲಾಗಿದೆ. ಇದಕ್ಕಾಗಿ ಅತ್ಯಂತ ಕ್ರಿಯಾಶೀಲಾಗಿರುವ ಯುವಕ-ಯುವತಿಯನ್ನು ಗುರುತಿಸಿ ಸಮಿತಿಗಳಲ್ಲಿ ಜವಾಬ್ದಾರಿ ನೀಡಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಶಕ್ತಿಶಾಲಿಯಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.

ಈಗ ನಾವು ತಲುಪಿಲ್ಲದ ಜನವಿಭಾಗವನ್ನು ತಲುಪಬೇಕು. ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘಗಳ ಸದಸ್ಯರನ್ನು ಒಟ್ಟುಗೂಡಿಸಿ ಘಟಕ ರಚನೆ ಮಾಡಬೇಕು. ಹಾಗೆಯೇ ಅಸಂಘಟಿತ ಕಾರ್ಮಿಕರ ಘಟಕ ರಚನೆಯೂ ಆಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 40 ಮಂದಿ ಚಾಲಕರು ಕೆಲಸ ಮಾಡುತ್ತಿದ್ದಾರೆ. 25 ಲಕ್ಷ ಮಂದಿ ಬ್ಯಾಡ್ಜ್ ಹೊಂದಿದ್ದಾರೆ. 8 ಲಕ್ಷ ಮಂದಿ ಚಾಲಕರು ಸರ್ಕಾರದಲ್ಲಿ ನೋಂದಣಿ ಮಾಡಿಸಿಕೊಂಡಿದ್ದು ಅವರನ್ನು ಪಕ್ಷದ ತೆಕ್ಕೆಗೆ ತರಬೇಕು. ಅದಕ್ಕಾಗಿ ಡ್ರೈವರ್ ಘಟಕ ರಚನೆ ಯಾಗಬೇಕು. ವಕೀಲರ ಘಟಕ ಮತ್ತು ಸ್ಲಂ ಕಾಂಗ್ರೆಸ್ ಘಟಕಗಳನ್ನು ಕ್ರಿಯಾಶೀಲಗೊಳಿಸಬೇಕಿದೆ. ಹಾಗಾಗಿ ಜಿಲ್ಲಾ ಸಮಿತಿಗಳು ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಈ ವಿಭಾಗದ ಪ್ರಮುಖರನ್ನು ಸಂಪರ್ಕಿಸಿ ಅವರನ್ನು ಪಕ್ಷದಲ್ಲಿ ತೊಡಗಿಸಿಕೊಳ್ಳಲು ಕ್ರಮ ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular