ಸಚಿವ ಆನಂದ್ ಸಿಂಗ್ ಅವರ ಖಾತೆ ಬದಲಾವಣೆ ಸಂಬಂಧ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದವಾಗಿದ್ದೇನೆ. ಪಕ್ಷದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಜವಾಬ್ದಾರಿಯನ್ನು ವರಿಷ್ಠರ ಹೆಗಲಿಗೆ ಹಾಕಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿನ ಅಸಮಾಧಾನದ ಹೊಗೆ ಕಡಿಮೆಯಾದಂತೆ ಆಗಿದೆ.
ತಮ್ಮನ್ನು ಭೇಟಿ ಮಾಡಿದ ಸಚಿವ ಆನಂದ್ ಸಿಂಗ್ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದು ಕ್ಲಿಷ್ಟಕರ ಪರಿಸ್ಥಿತಿ. ಇಂತಹ ಸ್ಥಿತಿಯಲ್ಲಿ ಸಚಿವರ ಭಾವನೆಗಳಿಗೆ ಸ್ಪಂದಿಸುತ್ತೇವೆ. ಆದರೆ ನಿರ್ಧಾರ ಏನಾಗಬಹುದೆಂಬುದನ್ನು ನೋಡಬೇಕು ಎಂದು ಹೇಳಿದರು.
ಖಾತೆ ಬದಲಾವಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕು. ಈ ವಿಷಯವನ್ನು ಕೂಡ ಆನಂದ್ ಸಿಂಗ್ ಗಮನಕ್ಕೆ ತಂದಿದ್ದೇನೆ. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆನಂದ್ ಸಿಂಗ್ ಆವರು ನನ್ನ ಸಾಮರ್ಥ್ಯಕ್ಕೆ ತಕ್ಕ ಖಾತೆಯನ್ನು ನೀಡಿಲ್ಲ. ಹೆಚ್ಚಿನ ಖಾತೆಯನ್ನು ನಿಭಾಯಿಸುವ ಶಕ್ತಿ ಇದೆ ಎಂದು ತಿಳಿಸಿದರು. ಅವರು ಹೇಳುವುದರಲ್ಲಿ ನ್ಯಾಯವಿದೆ. ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆನಂದ್ ಸಿಂಗ್ ನನಗೆ ಒಳ್ಳೆಯ ಸ್ನೇಹಿತರು. ಯಾವುದೇ ವಿಚಾರದಲ್ಲಿ ಬೇಸರ ಇಲ್ಲ. ಸಾಮರ್ಥ್ಯಕ್ಕೆ ತಕ್ಕ ಖಾತೆ ನೀಡುವುದು ವರಿಷ್ಠರಿಗೆ ಬಿಟ್ಟ ವಿಷಯ ಎಂದರು.
ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಆನಂದ್ ಸಿಂಗ್ ಭಾಷಣ ಮಾಡಲಿದ್ದಾರೆ. ನನ್ನ ಮಾತುಗಳಿಗೆ ಅವರು ಗೌರವ ನೀಡಿದ್ದಾರೆ ಎಂದು ಹೇಳಿದರು.
ರಾಜಿನಾಮೆ ಪ್ರಶ್ನೆ ಇಲ್ಲ:
ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪರಿಸರ ಸಚಿವ ಆನಂದ್ ಸಿಂಗ್ ಸಿಎಂ ಮಾತಿಗೆ ಗೌರವ ಕೊಟ್ಟು ಕಾಯುತ್ತೇನೆ. ಖಾತೆಯ ಬಗ್ಗೆ ಅಸಮಾಧಾನ ಇದ್ದುದು ನಿಜ. ಹಾಗಾಗಿ ವರಿಷ್ಠರ ತೀರ್ಮಾನಕ್ಕಾಗಿ ಕಾದು ನೋಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳ ಮನವಿ ಪರಿಗಣಿಸಿದ್ದೇನೆ. ಆದ್ಯತೆ ಕೊಟ್ಟು ಖಾತೆ ಬದಲಾವಣೆಯ ಭರವಸೆ ಸಿಕ್ಕಿದೆ. ವರಿಷ್ಠರ ಬಳಿ ಮಾತನಾಡುವ ಭರವಸೆ ನೀಡಿದ್ದಾರೆ. ಅದಕ್ಕೆ ಗೌರವ ನೀಡುತ್ತೇನೆ ಎಂದರು.
‘ನಾನು ರಾಜಿನಾಮೆ ಕೊಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಹಾಗಾಗಿ ರಾಜಿನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉಲ್ಟಾ ಹೊಡೆದರು.
ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಮಾತನಾಡಿರುವ ಆನಂದ್ ಸಿಂಗ್ ತಾತ್ಕಾಲಿಕವಾಗಿ ತಮ್ಮ ಅಸಮಾಧಾನವನ್ನು ನುಂಗಿಕೊಂಡಿದ್ದಾರೆ. ಖಾತೆ ಬದಲಾವಣೆ ಆಗದಿದ್ದರೆ ಮುಂದೆ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾಲವೇ ನಿರ್ಧರಿಸಲಿದೆ. ಭಿನ್ನ ಸಚಿವರ ನಡೆ ಮುಖ್ಯಮಂತ್ರಿಗಳ ಪಾಲಿಗೆ ನುಂಗಲಾರದ ತುತ್ತಿನಂತೆ ಆಗಿರುವುದಂತೂ ಸತ್ಯ.