ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಹೆಚ್.ಎಂ.ಎಸ್ ಇಂಗ್ಲೀಷ್ ಶಾಲೆಯ ವತಿಯಿಂದ ಶಾಲೆಯ ಮಕ್ಕಳು ಮತ್ತು ಪೋಷಕರಿಗಾಗಿ ಪೋಕ್ಸೋ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೂಫಿಯಾ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ಓಬಯ್ಯ, ಪೋಕ್ಸೋ ನವಜಾತ ಶಿಶುವಿನಿಂದ ಹಿಡಿದು 18 ವರ್ಷದ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ರೂಪಿಸಿದ ಅತ್ಯಂತ ಪರಿಣಾಮಕಾರಿ ಕಾಯ್ದೆಯಾಗಿದೆ ಎಂದರು.
ಶಾಲಾ, ಕಾಲೇಜುಗಳಲ್ಲಿ, ಮನೆಯಲ್ಲಿ,ತನ್ನ ರಕ್ತ ಸಂಬಂಧಿಗಳು ಸೇರಿದಂತೆ ಗಂಡು ಮಕ್ಕಳಿಂದ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ಹೆಣ್ಣು ಮಗುವಿಗೆ ರಕ್ಷಣೆ ಒದಗಿಸುತ್ತದೆ. ಪೋಕ್ಸೋ ಕಾಯ್ದೆ ಅಡಿ ಅಪರಾಧವಾಗಬಹುದಾದ ಘಟನೆ ನಡೆದಿದೆ ಎಂದ ಕಂಡು ಬಂದರೆ ಮಗುವಿನ ಪೋಷಕರು, ಇಲ್ಲವೆ ಸಂಬಂಧಿಕರು, ಇಲ್ಲವೇ ನೆರೆ ಹೊರೆಯವರು ಸಹ ದೂರು ಸಲ್ಲಿಸಬಹುದು. ಇಂತಹ ದೂರುಗಳ ಬಂದಾಗ ತನಿಖಾಧಿಕಾರಿಯಾಗಲಿ, ನ್ಯಾಯಾಧೀಶರಾಗಲಿ ಮನೆಯ ವಾತಾವರಣದಲ್ಲಿ ಮಗುವಿನಿಂದ ಮಾಹಿತಿ ಕಲೆ ಹಾಕಿ ದೋಷಾರೋಪಣೆ ಪಟ್ಟಿ ಸಲ್ಲಿಸಬೆಕಾಗುತ್ತದೆ. ಭಯ ಮುಕ್ತ, ಮಕ್ಕಳ ಸ್ನೇಹಿ ವಾತಾವರಣದಲ್ಲಿ ತನಿಖೆ ನಡೆಯಬೇಕಾಗುತ್ತದೆ. ಹಾಗಾಗಿ ಮಕ್ಕಳಿಗೆ ತಂದೆ, ತಾಯಿಗಳು ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ತಿಳಿ ಹೇಳಿ, ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸೂಫ್ಹಿಯ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ರಮೇಶ್ ಮಾತನಾಡಿ, ಅಪ್ರಾಪ್ತ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಧರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಆದರೆ ಈ ಆಘಾತಕಾರಿ ಬೆಳವಣಿಗೆಗೆ ಯಾರನ್ನು ದೂಷಿಸಬೇಕು ಎಂಬುದೇ ದೊಡ್ಡ ತಲೆನೋವಾಗಿದೆ. ಇದರಲ್ಲಿ ತಂದೆ, ತಾಯಿ, ಶಾಲೆಯ ಶಿಕ್ಷಕರು, ಸಮಾಜ ಎಲ್ಲರ ಜವಾಬ್ದಾರಿಯೂ ಇದೆ. ಮಕ್ಕಳ ಚಲನವಲನಗಳ ನಿಗಾವಹಿಸುವುದು ಶಾಲೆಯ ಶಿಕ್ಷಕರು ಮತ್ತು ಪೋಷಕರ ಇಬ್ಬರ ಜವಾಬ್ದಾರಿಯೂ ಇದೆ ಎಂದರು.
ಬಿಡುವಿಲ್ಲ ಎಂದ ಮಕ್ಕಳಿಗೆ ಸಮಯ ನೀಡದೆ, ಅವರ ಕೈಗೆ ಮೊಬೈಲ್ ಕೊಟ್ಟು, ಒಳ್ಳೆಯದು, ಕೆಟ್ಟದ್ದು ಎಲ್ಲವನ್ನು ನೋಡಲು ಅವಕಾಶ ಮಾಡಿಕೊಟ್ಟಾಗ, ತಿಳುವಳಿಕೆ ಇಲ್ಲದ ವಯಸ್ಸಿನ ಮಕ್ಕಳು ಇಂತಹ ಆಘಾತಕಾರಿ ಪ್ರಕರಣಗಳಲ್ಲಿ ಸಿಲುಕುತಿದ್ದು, ಈ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಒನ್ ಸ್ಟೆಪ್ ಸೆಂಟರ್ ಸಖಿ ಆಡಳಿತಾಧಿಕಾರಿ ರಾಧಮಣಿ, ಹೆಚ್.ಎಂ.ಎಸ್ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಜಬೀನ್ ಫಾತಿಮ ಮಾತನಾಡಿದರು.