Friday, October 18, 2024
Google search engine
Homeಚಳುವಳಿಪಾರ್ಥ ಕ್ರಿಯಾಶೀಲ ಹೋರಾಟಗಾರ-ಜನಪರ ಚಿಂತಕ ಕೆ.ದೊರೈರಾಜ್

ಪಾರ್ಥ ಕ್ರಿಯಾಶೀಲ ಹೋರಾಟಗಾರ-ಜನಪರ ಚಿಂತಕ ಕೆ.ದೊರೈರಾಜ್

ದಲಿತ ಸಂಘರ್ಷ ಸಮಿತಿಯ ಆರಂಭದಿಂದಲೂ ಸಕ್ರಿಯವಾಗಿದ್ದ ಪಾರ್ಥಸಾರಥಿ ಚಳವಳಿಯಲ್ಲಿ ವಿಕಸಿತಗೊಂಡಿದ್ದ ಕ್ರಿಯಾಶೀಲ ಹೋರಾಟಗಾರ ಎಂದು ಚಿಂತಕ ಪ್ರೊ.ದೊರೈರಾಜು ಹೇಳಿದರು.

ತುಮಕೂರು ನಗರದ ಐಎಂಎ ಸಭಾಂಗಣದಲ್ಲಿ ನಡೆದ ಒಳ ಮೀಸಲಾತಿ ಹೋರಾಟಗಾರ ದಿ.ಸಿ.ಎಸ್.ಪಾರ್ಥಸಾರಥಿ ಅವರ ನುಡಿನಮನದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸಂಕುಚಿತ ಮನೋಭಾವದ ವಿದ್ಯಾರ್ಥಿಯಾಗಿದ್ದ ಪಾರ್ಥಸಾರಥಿ, ಚಳವಳಿಯಿಂದ ವಿಸ್ತಾರವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು ಎಂದರು.

ಪರಿಪೂರ್ಣ ಸಮಾಜದ ಬದಲಾವಣೆಯ ತುಡಿತ ಹೊಂದಿದ್ದ ಪಾರ್ಥ, ನಿರ್ಲಕ್ಷಿತ ಸಮುದಾಯಗಳ ಮಕ್ಕಳಿಗಾಗಿ ಕಂಪ್ಯೂಟರ್ ಶಿಕ್ಷಣ ಪ್ರಾರಂಭಿಸಿದ್ದರು, ದೇವದಾಸಿ ಮಹಿಳೆಯರಿಗಾಗಿ ಮುಧೋಳದಲ್ಲಿ ಮಹಿಳಾ ಸ್ವಸಹಾಯ ಸಂಘವನ್ನು ಪ್ರಾರಂಭಿಸಲು ನೆರವಾಗಿದ್ದ, ನಿರುದ್ಯೋಗಿ ಯುವಕರಿಗೆ ಕೌಶಲ್ಯ ಕಲ್ಪಿಸಲು ಶ್ರಮಿಸುತ್ತಿದ್ದರು. ಪಾರ್ಥಸಾರಥಿ ಅವರಿಗಿದ್ದ ಸಮುದಾಯ ಕಳಕಳಿ ಬದ್ಧತೆ, ನಮ್ಮ ಸಮುದಾಯದ ರಾಜಕಾರಣಿಗಳಿಗೆ ಇದ್ದಿದ್ದರೆ ನಮ್ಮ ಸಮುದಾಯ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು, ಪಾರ್ಥ ಮಾಡಿದ ಕೆಲಸದಲ್ಲಿ ಒಂದರಷ್ಟು ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಮನವಿ ಮಾಡಿದರು.

ಹೈಕೋರ್ಟ್ ವಕೀಲ ಹೆಚ್.ವಿ.ಮಂಜುನಾಥ್ ಮಾತನಾಡಿ, ಹೋರಾಟದ ಚೈತನ್ಯ ಪಾರ್ಥ ಸಾರಥಿಯನ್ನು ಕಳೆದುಕೊಂಡಿದ್ದೆವು, ಸುಪ್ರೀಂ ಕೋರ್ಟ್ ವಕೀಲರಾದ ಸಂಜಯ್ ನೂಲಿ ಫೋನ್ ಮಾಡಿ ಏನಾಗಿತ್ತು ಎಂದು ವಿಚಾರಿಸಿದರು, ಯಾರು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ನಂಬಿರಲಿಲ್ಲ, ತಳ ಸಮುದಾಯಗಳಿಗಾಗಿ ತುಮಕೂರಿನಿಂದ ಸುಪ್ರೀಂ ಕೋರ್ಟ್ ವರೆಗೆ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಒಳ ಮೀಸಲಾತಿ, ಸಮುದಾಯದ ವಿಚಾರಕ್ಕಾಗಿ ಸಾಕಷ್ಟು ಭಾರೀ ನನ್ನೊಂದಿಗೆ ಪಾರ್ಥ ಸಾರಥಿ ಮಾತನಾಡುತ್ತಿದ್ದರು, ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ನೀಡಿ ತಳ ಸಮುದಾಯಗಳಿಗೆ ಆಗುತ್ತಿದ್ದ ಅನ್ಯಾಯವನ್ನು ತೆಗೆದಿಟ್ಟು, ಹೋರಾಟವನ್ನು ರೂಪಿಸಿದ್ದರು, ಅವರಿಂದಲೇ ನಾನು ಸುಳ್ಳು ಜಾತಿ ಪ್ರಮಾಣಪತ್ರದ ಬಗ್ಗೆ ಮಾತನಾಡುವಂತೆ ಆಗಿದೆ ಎಂದರು.

ಸಮಾಜ ಕೊಳೆಯನ್ನು ತೊಳೆಯುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ ಪಾರ್ಥ ಸಾರಥಿ ಅಜ್ಞಾತ ಹೋರಾಟಗಾರ, ಮುಖ್ಯವಾಹಿನಿಯ ಹೋರಾಟಗಳಿಂದ ದೂರವಿದ್ದರು, ಚಳವಳಿಗಳ ಬೆನ್ನೆಲುಬಾಗಿ ನಿಂತಿದ್ದರು, ಬೌದ್ಧಿಕವಾಗಿ ದಲಿತ ಸಮುದಾಯದ ಹೋರಾಟದ ಕೆಂಡವನ್ನು ಆರದಂತೆ ನೋಡಿಕೊಂಡ ಧೀಮಂತ ವ್ಯಕ್ತಿತ್ವ ಎಂದರು.

ರೇಷ್ಮೆ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಪಾರ್ಥಸಾರಥಿ ಅವರು ದಲಿತ ಹೋರಾಟದ ಮುಖ್ಯ ವೇದಿಕೆಯಲ್ಲಿ ಕೆಲಸ ಮಾಡಿದರು, ಬೀದಿ ಹೋರಾಟವನ್ನು ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ವರ್ಗೀಕರಣ ಮಾಡಿಸಿದ ರೂವಾರಿ, ಅವಕಾಶ ವಂಚಿತ ಸಮುದಾಯದ ಪರವಾಗಿ ಹಗಲು ರಾತ್ರಿ ಕೆಲಸ ಮಾಡಿದ ಹೋರಾಟಗಾರ ಎಂದು ಸ್ಮರಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಇರುವವರು ಸಮುದಾಯ, ಹೋರಾಟದಿಂದ ದೂರ ಇರುತ್ತಾರೆ. ಆದರೆ ಇವರೊಂದಿಗಿನ ಒಡನಾಟ ನನ್ನ ವ್ಯಕ್ತಿತ್ವ ಬದಲಾಗಲು ಕಾರಣವಾಯಿತು, ಇಡೀ ಭಾರತದಲ್ಲಿ ಮಾತಂಗ ಸಮುದಾಯ ನೆಲೆಯನ್ನು ಸುದೀರ್ಘವಾಗಿ ಅಧ್ಯಯನ ಮಾಡಿದ್ದರು. ವೈಯಕ್ತಿಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮುದಾಯಕ್ಕಾಗಿ ದುಡಿದ ಪಾರ್ಥಸಾರಥಿ ಅವರು, ವಿಶ್ವವಿದ್ಯಾಲಯಗಳಿಂದ ಉನ್ನತ ಹುದ್ದೆಗಳವರಿಗೆ ನನ್ನ ಸಮುದಾಯದವರು ಇರಬೇಕು ಎಂದು ಆಲೋಚಿಸುತ್ತಿದ್ದರು, ಅವರ ಪ್ರಾಮಾಣಿಕ ಸಮುದಾಯದ ಸೇವೆಯಿಂದ ಉನ್ನತ ಅಧಿಕಾರಿಗಳು, ರಾಜಕಾರಣಿಗಳ ಸಂಪರ್ಕ ಹೊಂದಿದ್ದರು ಸಹ ತನಗಾಗಿ ಏನು ಮಾಡಿಕೊಳ್ಳಲಿಲ್ಲ ಎಂದು ಸ್ಮರಿಸಿದರು.

ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ, ಹೋರಾಟಗಾರ ಕೊಟ್ಟ ಶಂಕರ್, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಡಾ.ಲಕ್ಷ್ಮಣ್‌ದಾಸ್, ಪಾವನ ಆಸ್ಪತ್ರೆಯ ಡಾ.ಮುರುಳೀಧರ್, ಚರಕ ಆಸ್ಪತ್ರೆಯ ಡಾ.ಬಸವರಾಜು, ವಕೀಲರಾದ ಬೈಲಪ್ಪ ದೊಡ್ಡೇರಿ, ಐಎಂಎ ಜಿಲ್ಲಾಧ್ಯಕ್ಷ ಡಾ.ಹೆಚ್.ವಿ. ರಂಗಸ್ವಾಮಿ, ದಲಿತ ಹೋರಾಟಗಾರ ನರಸೀಯಪ್ಪ, ನಿವೃತ್ತ ಎಂಜನಿಯರ್ ಶಿವಕುಮಾರ್, ಡಿ.ಟಿ.ವೆಂಕಟೇಶ್, ವಕೀಲರಾದ ರಂಗಧಾಮಯ್ಯ, ಪ್ರೊ.ಜಯಶೀಲ, ಹೆಗ್ಗೆರೆ ಪ್ರಸನ್ನಕುಮಾರ್, ತಿಪಟೂರು ಕೃಷ್ಣ, ಎ.ನರಸಿಂಹಮೂರ್ತಿ, ನರಸಿಂಹರಾಜು, ಪಾರ್ಥ ಸಾರಥಿ ಅವರ ಮಗಳು ಹಸನ್ಮುಖಿ ನುಡಿನಮನ ಸಲ್ಲಿಸಿದರು.

ನುಡಿನಮನದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಹಣಕಾಸು ಅಧಿಕಾರಿ ನರಸಿಂಹಮೂರ್ತಿ, ಯೋಜನಾಧಿಕಾರಿ ಸಣ್ಣಮಸೀಯಪ್ಪ, ವಕೀಲ ಮಾರುತಿ ಪ್ರಸಾದ್, ಮುರುಳಿ ಕುಂದೂರು, ಡ್ಯಾಗೇರಹಳ್ಳಿ ವಿರೂಪಾಕ್ಷ, ಡಾ.ಅರುಂಧತಿ, ಸುಗಂಧಿನಿ ಪಾರ್ಥಸಾರಥಿ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular