Friday, October 18, 2024
Google search engine
Homeಮುಖಪುಟಮುಡಾ ಹಗರಣ-ವರದಿ ಬಂದ ಮೇಲೆ ಕ್ರಮ ಎಂದ ಸಿದ್ದರಾಮಯ್ಯ

ಮುಡಾ ಹಗರಣ-ವರದಿ ಬಂದ ಮೇಲೆ ಕ್ರಮ ಎಂದ ಸಿದ್ದರಾಮಯ್ಯ

ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದು ಬಹಳಾ ಜನರಿಗೆ ಹೊಟ್ಟೆಯುರಿ ಉಂಟುಮಾಡಿದೆ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ. ನನ್ನ 4 ದಶಕಗಳ ರಾಜಕೀಯ ಜೀವನದಲ್ಲಿ ಇಂಥಾ ಬಹಳಷ್ಟು ಪಿತೂರಿ, ಷಡ್ಯಂತ್ರ ನೋಡಿ, ಎದುರಿಸಿ ಬಂದಿದ್ದೀನಿ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ರಾಜಕೀಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಮಾತ್ರ ರಾಜಕೀಯ ಮಾಡಲು ಗೊತ್ತಿರುವುದಲ್ಲ, ನಮಗೂ ರಾಜಕೀಯವಾಗಿ ಪ್ರತಿರೋಧ ನೀಡಲು ತಿಳಿದಿದೆ. ಬಿಜೆಪಿಯವರು ಬೇಕಾದರೆ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿಯೇ ಪ್ರತಿಭಟನೆ ಮಾಡಲಿ ಯಾರ ತಕರಾರೂ ಇಲ್ಲ. ಮೂಡಾ ನಿವೇಶನ ಹಂಚಿಕೆ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದಿದ್ದಾರೆ

ಬದಲಿ ನಿವೇಶನ ನೀಡಿರುವುದು ಕಾನೂನುಬದ್ಧವಾಗಿದೆ ಎನ್ನುವುದು ನಮ್ಮ ವಾದ. ಅವರು ಕಾನೂನುಬಾಹಿರವಾಗಿದೆ ಎಂದು ಹೇಳುತ್ತಾರೆ. ಹಾಗಿದ್ದರೆ ದಾಖಲೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಜಿಲ್ಲಾಧಿಕಾರಿಗಳು 2005 ರಲ್ಲಿ ಭೂ ಪರಿವರ್ತನೆ ಮಾಡಿದ್ದು, ನಿವೇಶನ ಮಾಡುವ ಮುನ್ನ ಜಮೀನು ಕೃಷಿ ಭೂಮಿಯೇ ಆಗಿತ್ತು. ಮಲ್ಲಿಕಾರ್ಜುನ ಸ್ವಾಮಿ ನನ್ನ ಭಾವಮೈದುನ. 2010 ರಲ್ಲಿ ದಾನಪತ್ರ ಕೊಟ್ಟಿದ್ದಾರೆ. ಇದರಲ್ಲಿ ಅಕ್ರಮವೇನಾಗಿದೆ? ಕೃಷಿ ಭೂಮಿ ಎಂದು ಕೊಟ್ಟಿದ್ದರೂ ಕೂಡ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.

2014 ರಲ್ಲಿ ಮೂಡಾ ಜಮೀನು ಅಲ್ಲದೆ ಹೋದರೂ ಕೂಡ ನಮ್ಮ ಜಮೀನಲ್ಲಿ ನಿವೇಶನ ಮಾಡಿ ಹಂಚಿದ್ದಾರೆ. ಅದಕ್ಕೆ ನಾವು ಸುಮ್ಮನೆ ಬಿಡಬೇಕಾ? ಬದಲಿ ನಿವೇಶನ ಕೇಳಿದ್ದವೇ ಹೊರತು ಇಂಥಾ ಜಾಗದಲ್ಲಿಯೇ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಆಗ ಮೂಡಾ ಸದಸ್ಯರೆಲ್ಲಾ ಏನು ಮಾಡುತ್ತಿದ್ದರು? ಬಿಜೆಪಿ ಸರ್ಕಾರವೇ ಇತ್ತು ಆಗ. ಕಾನೂನು ಪ್ರಕಾರ ನಮಗೆ ಬೇರೆ ಜಮೀನು ಕೊಡಬೇಕು ಎಂದು ತಿಳಿಸಿದ್ದಾರೆ.

ಇದೇ ರೀತಿಯಲ್ಲಿ ಸುಂದರಮ್ಮ ಪ್ರಕರಣದಲ್ಲಿ ಅವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಉಚ್ಚ ನ್ಯಾಯಾಲಯ ಅಷ್ಟು ಜಾಗವನ್ನೂ ಕೊಡಲು ಆದೇಶಿಸಿ ಒಂದು ಲಕ್ಷ ರೂಪಾಯಿ ದಂಡವನ್ನೂ ಮೂಡಾಗೆ ಹಾಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಡಾ ತಪ್ಪು ಮಾಡಿದ್ದರೆ ಯಾರು ಜವಾಬ್ದಾರರು? ಸಿದ್ದರಾಮಯ್ಯ ಜವಾಬ್ದಾರರೇ? ಒಂದು ವೇಳೆ ಇದನ್ನು ರದ್ದು ಮಾಡಿದರೆ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕಲ್ಲವೇ. ಅದರ ಪ್ರಕಾರ 57 ಕೋಟಿಯಾದರೆ ಬಡ್ಡಿ ಸೇರಿಸಿ 62 ಕೋಟಿಯಾಗುತ್ತದೆ. ಮೂಡಾದವರು 62 ಕೋಟಿ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.

2021ರಲ್ಲಿ ನಾನು ವಿರೋಧ ಪಕ್ಷದ ನಾಯಕ ಇದ್ದೆ. ಆಗ ನಾನು ಹೇಳಿದ್ದನ್ನು ಕೇಳಿ ಸರ್ಕಾರ ಕೆಲಸ ಮಾಡುತ್ತಿತ್ತಾ? ಮೂಡಾ ಮೊದಲಿನಿಂದಲೂ ಗಬ್ಬೆದ್ದು ಹೋಗಿದ್ದು, ಅದನ್ನು ಸ್ವಚ್ಛ ಮಾಡಬೇಕಿದೆ. ನಮಗೆ ನಿವೇಶನ ಕೊಟ್ಟಿದ್ದು ಹಗರಣವಲ್ಲ. ನಮ್ಮ ಜಮೀನನ್ನು ಮುಡಾದವರು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆ. ಬೇರೆಯವರ ಹಾಗೆ ನಾವೇ ಮುಡಾಗೆ ಜಮೀನು ಬಿಟ್ಟುಕೊಟ್ಟು ಪರಿಹಾರ ಕೇಳುತ್ತಿರೋದಲ್ಲ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

2020ನೇ ಇಸವಿಯಲ್ಲಿ ಮೂಡಾ ಅಲ್ಲದೇ ಬೇರೆ ಅಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ 50:50 ಅನುಪಾತ ಜಾರಿಗೆ ಬಂದಿದೆ. ಇದರಿಂದ ಅಭಿವೃದ್ಧಿ ಪ್ರಾಧಿಕಾರಗಳಿಗೆ ಲಾಭವಾಗುತ್ತದೆಯೇ ಹೊರತು ನಷ್ಟವಾಗುವುದಿಲ್ಲ. ಭೂಮಾಲೀಕರಿಗೆ ನಷ್ಟವುಂಟಾಗಬಾರದು ಎಂದು ತನಿಖೆ ನಡೆಸಲಾಗುತ್ತಿದೆ. ಮೂಡಾ ಆಯುಕ್ತರು, ಮತ್ತಿತರರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಈ ದುರುಪಯೋಗ ತಡೆಯಲು ತನಿಖೆ ನಡೆಸಿ ಸರಿಮಾಡುತ್ತೇವೆ.

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಖಜಾನೆ ಇಲಾಖೆಯಿಂದ ಬೇರೆ ಖಾತೆಗಳಿಗೆ ರೂ.180 ಕೋಟಿ ವರ್ಗಾವಣೆ ಆಗಿಲ್ಲ. ಖಜಾನೆಯಿಂದ ಇಲಾಖೆಗೆ ಹಣ ಹೋಗಿರುತ್ತದೆ. ಅಲ್ಲಿ ಅವ್ಯವಹಾರವಾಗಿರುವ ಬಗ್ಗೆ ಎಸ್.ಐ. ಟಿ ತನಿಖೆ ಮಾಡುತ್ತಿದೆ. ಸಿಬಿಐ, ಎಸ್.ಐ ಟಿ ಮತ್ತು ಇ. ಡಿ. ಹೀಗೆ ಮೂರು ಸಂಸ್ಥೆಗಳ ಮೂಲಕ ತನಿಖೆಗಳಾಗುತ್ತಿದೆ. ತನಿಖೆ ವರದಿ ಇನ್ನೂ ಬಂದಿಲ್ಲ.

ಬ್ಯಾಂಕುಗಳಲ್ಲಿ ಆಗುವ ಅವ್ಯವಹಾರಗಳಿಗೆಲ್ಲಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿಗಳು ರಾಜೀನಾಮೆ ನೀಡಬೇಕಲ್ಲ. ಜಿ.ಟಿ ದೇವೇಗೌಡರು ಅವರ ರಾಜೀನಾಮೆ ಕೇಳಿದ್ದಾರ? ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ವರದಿಯಾಗಲಿ ಅಂತಿಮ ವರದಿಯಾಗಲಿ ಯಾವುದೂ ಬಂದಿಲ್ಲ. ಆರೋಪಪಟ್ಟಿ ಹಾಕಿದ ಮೇಲೆ ವರದಿ ಬರುತ್ತದೆ.

ಖಜಾನೆಯಿಂದ ಹಣ ವರ್ಗಾವಣೆ ಆಗುವಾಗ ಪ್ರತಿ ಸಾರಿಯೂ ನನ್ನ ಬಳಿ ಬರುವುದಿಲ್ಲ. ಎಷ್ಟು ಹಣವಿದೆಯೋ ಅಷ್ಟನ್ನು ಅಧಿಕಾರಿಗಳು ಬಿಡುಗಡೆ ಮಾಡುತ್ತಾರೆ. ಅದಕ್ಕೆ ನನ್ನ ಸಹಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular