ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿಯ ಸಿ.ಯಡವನಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ ಕುಕ್ಕರ್ ಸ್ಪೋಟಿಸಿದ್ದು, ಅಂಗನವಾಡಿಯಲ್ಲಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳೆಯ ಶಾಲಾ ಕಟ್ಟಡದ ಅಡುಗೆ ಕೋಣೆಯಲ್ಲಿ ಅಂಗನವಾಡಿ ನಡೆಯುತ್ತಿದೆ. ಅಂಗನವಾಡಿ ನಡೆಯುತ್ತಿರುವ ಕಟ್ಟಡ ಶಿಥಿಲ ಸ್ಥಿತಿಯಲ್ಲಿದೆ. ಆದರೂ ಇಲ್ಲಿಯೇ ಅಂಗನವಾಡಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ.
2019 ರಿಂದ ಅಂಗನವಾಡಿಗೆ ನಿವೇಶನ ಕೊಡಿ ಎಂದು ಸರ್ಕಾರಕ್ಕೆ ಹಲವು ಭಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ, ತಾಲೂಕು ಆಡಳಿತಕ್ಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಸಹ ಮನವಿಯನ್ನು ಮಾಡಲಾಗಿದೆ. ಆದರೂ ಸಹ ಸ್ವಂತ ಕಟ್ಟಡ ಇಲ್ಲದೆ ಇರುವುದರಿಂದ ಹಳೆಯ ಕಟ್ಟಡದಲ್ಲಿಯೇ ಅಂಗನವಾಡಿ ನಡೆಸಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಶುಕ್ರವಾರ ಮಧ್ಯಾನ ವಿದ್ಯಾರ್ಥಿಗಳಿಗೆ ಅಡುಗೆ ಸಿದ್ದಪಡಿಸುವಾಗ ಆಕಸ್ಮಿಕವಾಗಿ ಕುಕ್ಕರ್ ಬ್ಲಾಸ್ಟ್ ಆಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ. ಕುಕ್ಕರ್ ಏಕಾಏಕಿ ಮೇಲೆ ಎಗರಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಉಪತಹಶಿಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್, ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.