ಮುಡಾದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇದರಿಂದ ಮಾತ್ರ ಎಲ್ಲ ಸತ್ಯ ಹೊರಬರಲಿದೆ. ಇಲ್ಲವಾದರೆ ಇಡೀ ಪ್ರಕರಣವನ್ನು ರಾಜ್ಯ ಪೊಲೀಸರು ಮುಚ್ಚಿ ಹಾಕಲಿದ್ದಾರೆ. ಏಕೆಂದರೆ ಮುಖ್ಯಮಂತ್ರಿಯ ವಿರುದ್ಧ ತನಿಖೆ ಮಾಡಿ ಅವರನ್ನು ಆರೋಪಿ ಮಾಡುವಂತಹ ಸಾಹಸವನ್ನು ರಾಜ್ಯ ಪೊಲೀಸರು ಎಂದೂ ಮಾಡಲು ಸಾಧ್ಯವಿಲ್ಲ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ ಗೌಡರು ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಣ್ಣಪುಟ್ಟ ಹಗರಣವಲ್ಲ. ಇಲ್ಲಿ 5,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಅಕ್ರಮವಾಗಿದೆ. ಇದರಲ್ಲಿ ಮುಖ್ಯಮಂತ್ರಿಗಳ ಪತ್ನಿ ಪಾರ್ವತಮ್ಮ ನೇರವಾಗಿ ಪಾಲುದಾರರು. ಮುಖ್ಯಮಂತ್ರಿಯವರ ಆದೇಶ ಇಲ್ಲದೇ ಇದು ಆಗುವುದಿಲ್ಲ ಎಂದು ಹೇಳಿದರು.
1992 ರಲ್ಲಿ ಭೂಮಿ ವಶಕ್ಕೆ ಪಡೆಯುವ ಕೆಲಸವನ್ನು ಮುಡಾ ಶುರು ಮಾಡಿದೆ. ಆದರೆ, 2004 ರಲ್ಲಿ ಪಾರ್ವತಮ್ಮ ಸೋದರ ಭೂಮಿ ಖರೀದಿ ಮಾಡಿದ್ದಾರೆ. ಮೂಡಾ ಸ್ವಾಧೀನದಲ್ಲಿದ್ದ ಜಾಗವನ್ನು ಅವರು ಹೇಗೆ ಖರೀದಿ ಮಾಡಿದರು. ನಂತರ 2009-10 ರಲ್ಲಿ ಅವರು ತಮ್ಮ ಸೋದರಿಗೆ ಕಾಣಿಕೆಯಾಗಿ ನೀಡಿದಾಗಲೂ ಅದರ ಆರ್.ಟಿ.ಸಿ ಮುಡಾದಲ್ಲಿಯೇ ಇತ್ತು. ಇದು ಎಲ್ಲಿಯಾದರೂ ಸಾಧ್ಯವೇ ಎಂದು ಕೇಳಿದರು.
2022 ರ ಜನವರಿ 12 ರಂದು ಕ್ರಯಪತ್ರ ಆಗಿದ್ದು 1991 ರ ಪ್ರೋತ್ಸಾಹದಾಯಕ ಯೋಜನೆಯಡಿ ಎಂದು ಉಲ್ಲೇಖಿಸಿ 14 ನಿವೇಶನ ಮಂಜೂರು ಮಾಡಿದ್ದಾರೆ. ನಿಯಮಗಳ ಪ್ರಕಾರ ಪಾರ್ವತಮ್ಮ ಅವರಿಗೆ ಕೊಡಬೇಕಾದುದು ಕೇವಲ 2 ನಿವೇಶನ. ಅದರ ಬದಲಿಗೆ 14 ನಿವೇಶನ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಅರ್ಜಿ ಸಲ್ಲಿಸಿದ ನಂತರ ಮುಡಾ ಅಧ್ಯಕ್ಷ ಮತ್ತು ಆಯುಕ್ತರು 50:50 ಅನುಪಾತದಲ್ಲಿ ನಿವೇಶನ ನೀಡಿದ್ದಾರೆ. ಇದರಿಂದ ಮುಡಾಗೆ ನಷ್ಟವಾಗಿದೆ. 50:50 ಅನುಪಾತದಲ್ಲಿ ಹಂಚಿಕೆ ಮಾಡುವುದಾದರೆ ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆದು ಆದೇಶವಾಗಬೇಕು. ಆದರೆ, ಇಲ್ಲಿ ಅಕ್ರಮವಾಗಿ ಅವರೇ ಹಂಚಿಕೆ ಮಾಡಿಕೊಂಡಿದ್ದಾರೆ ಎಂದರು.
ಡಿನೋಟಿಫೈ ಆದ ಭೂಮಿಯ ಬದಲಿಗೆ ಪ್ರತಿಷ್ಠಿತ ಸ್ಥಳದಲ್ಲಿ ನಿವೇಶನ ನೀಡಲಾಗಿದೆ. ಡಿನೋಟಿಫೈ ಆದ ಜಮೀನನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಭೂ ಮಾಲೀಕರು ಅದನ್ನು ನೋಡಿಕೊಂಡು ಏಕೆ ಸುಮ್ಮನಿದ್ದರು ಎಂದು ಅನುಮಾನವಾಗುತ್ತದೆ. ಈ ಕುರಿತು ದಾಖಲೆಗಳನ್ನು ಕೇಳಿದ್ದರೂ ಯಾರಿಗೂ ಕೊಡುತ್ತಿಲ್ಲ. ಈ ವಹಿವಾಟುಗಳಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಮೈಸೂರು ಜಿಲ್ಲಾಧಿಕಾರಿ ಹಲವಾರು ಬಾರಿ ಮುಡಾಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆ. ಆದರೆ ಇದಕ್ಕೆ ಮುಡಾದಿಂದ ಉತ್ತರ ದೊರೆತಿಲ್ಲ. ಅಲ್ಲೇ ಎಲ್ಲರೂ ಸೇರಿಕೊಂಡು ಗ್ಯಾಂಗ್ ಮಾಡಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವಿದೆ ಎಂದರು. ಇಡೀ ಹಗರಣವನ್ನು ನಗರಾಭಿವೃದ್ಧಿ ಸಚಿವರೂ, ಮುಖ್ಯಮಂತ್ರಿಗಳ ಪರಮಾಪ್ತರೂ ಆದ ಭೈರತಿ ಸುರೇಶ್ ಅವರು ಮುಚ್ಚಿ ಹಾಕಲು ಎಲ್ಲ ಹುನ್ನಾರ ಮಾಡುತ್ತಿದ್ದಾರೆ. ಈ ಹೊಣೆಗಾರಿಕೆಯಿಂದ ಸುರೇಶ್ ಅವರನ್ನು ಬಿಡುಗಡೆ ಮಾಡಬೇಕು. ನಮಗೆ ಅವರಲ್ಲಿ ನಂಬಿಕೆಯಿಲ್ಲ ಎಂದು ಸುರೇಶ್ ಗೌಡರು ಆಗ್ರಹಿಸಿದರು.
ಮಾಧ್ಯಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ,ಮುಖಂಡರಾದ ಶಿವ ಪ್ರಸಾದ್, ಟಿ ಆರ್ ಸದಾಶಿವಯ್ಯ,ಹನುಮಂತರಾಜು,ಜಗದೀಶ್,ಗಣೇಶ್ ಇದ್ದರು.