ನಮನ್ನು ನಾವು ಜಗತ್ತಿಗೆ ತೆರೆದಿಡುವ ನೈತಿಕ ಕ್ರಮವೇ ಆತ್ಮಕಥೆಯಾದ್ದರಿಂದ ಆತ್ಮವಿಮರ್ಶೆಯ ಮುಖೇನ ಆತ್ಮಕಥೆಯನ್ನು ರಚಿಸಬೇಕೆ ಹೊರೆತು ಆತ್ಮರತಿಯಾಗಬಾರದು ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ತುಮಕೂರು ವಿವಿಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರ ಆತ್ಮಕಥನ ‘ಯರೆಬೇವು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆತ್ಮಕಥೆಗಳು ಸಮಾಜದ ಏಣಿ ಶ್ರೇಣಿಗಳು, ಅವಮಾನಗಳು, ದುಗುಡ-ದುಮ್ಮಾನಗಳ ಜೊತೆಗೆ ಆ ಕಾಲಘಟ್ಟದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿನ್ನೆಲೆಗಳ ಕೈಗನ್ನಡಿಯಾಗಿವೆ. ಬಾಳಕಥನ ಎಂಬುದು ರೂಪಕವಿದ್ದಂತೆ, ಪಾರದರ್ಶಕತೆಯಿಂದ ಕೂಡಿದ ಆತ್ಮಕಥೆ ಮಾತ್ರ ಶ್ರೇಷ್ಠವಾದದ್ದು ಎಂದರು.
ಹಿರಿಯ ಸಾಹಿತಿಗಳಾದ ಪಿ.ಲಂಕೇಶ್, ಗಿರೀಶ್‌ಕಾರ್ನಾಡ್, ಶ್ಯಾಮರಾಯರು, ಕುವೆಂಪು, ಶಿವರಾಮ ಕಾರಂತರ ಆತ್ಮಕಥೆಗಳು ನೈಜ ಭಾವವನ್ನು ಹೊಂದಿವೆ. ಬರೆಹಕ್ಕೆ ವಸ್ತುವಾಗುವಂತೆ ಬದುಕಬೇಕೆಂಬ ಪರಿಕಲ್ಪನೆಯಲ್ಲಿ ಅನೇಕ ಮಹಿಳಾ ಸಾಹಿತಿಗಳ ಉತ್ಕೃಷ್ಟ ಆತ್ಮಕಥಾನಕಗಳು ಬಂದಿವೆ. ಸಾಲುಮರದ ತಿಮ್ಮಕ್ಕ, ಮಾಟಗಾನಹಟ್ಟಿಯ ದಾಸಪ್ಪನಂತಹ ಅದೆಷ್ಟೋ ಅನಾಮಧೇಯ ಆತ್ಮಕಥೆಗಳನ್ನು ನಾವಿಂದು ಕಟ್ಟಬೇಕಿದೆ ತಿಳಿಸಿದರು.
‘ಯರೆಬೇವು’ ಆತ್ಮಕಥೆಯು ನನ್ನ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಕಟ್ಟಿಕೊಡುತ್ತದೆ. ಬಾಲ್ಯದ ಗೆಳೆಯರ ಅನುಭವ, ಗ್ರಾಮೀಣ ಸೊಗಡಿನ ಚಿತ್ರಣಗಳನ್ನು ಕಟ್ಟಿಕೊಡುತ್ತದೆ ಎಂದು ತಿಳಿಸಿದರು.