Tuesday, October 22, 2024
Google search engine
Homeಮುಖಪುಟಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ =ಸಿಎಂ ಸಿದ್ದರಾಮಯ್ಯ

ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ =ಸಿಎಂ ಸಿದ್ದರಾಮಯ್ಯ

ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಅವರು ಜಾತ್ಯಾತೀತರಾಗಿ ಬದುಕಿದಂತೆ ಸಮಾಜದ ಎಲ್ಲಾ ಜನರು ಬದುಕಿ ಅವರನ್ನು ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನಲ್ಲಿ ಕೆಂಪೇಗೌಡರ ಜಯಂತಿ ಆಚರಿಸಿ ಸಂಭ್ರಮಿಸುವುದಕ್ಕಷ್ಟೇ ಸೀಮಿತವಾಗಬಾರದು. ಕೆಂಪೇಗೌಡರು ಸಮಾಜಮುಖಿಯಾಗಿ ಕೆಲಸ ಮಾಡಿದಂತೆ ಪ್ರತಿಯೊಬ್ಬರೂ ಸಮಾಜಮುಖಿಯಾಗಿ, ವಿಶ್ವಮಾನವರಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದು ಅವರ ಜಯಂತಿ ಆಚರಣೆಯ ನೈಜ ಆಶಯವಾಗಿದೆ ಎಂದರು.

ಕೆಂಪೇಗೌಡರು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರು ಈ ನಾಡಿನ ದೊರೆಯಾಗಿ ಮಾದರಿ ಆಡಳಿತವನ್ನು ನೀಡಿದ್ದರು. ರೈತ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಅವರ ಆಡಳಿತದ ಅವಧಿಯಲ್ಲಿ ಜಾತಿ, ಧರ್ಮ ಎಂದು ವಿಂಗಡನೆ ಮಾಡಲಿಲ್ಲ. ಎಲ್ಲಾ ಜನಾಂಗ, ಜಾತಿಯವರನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದರು. ಅವರ ಆಡಳಿತ ಕಾಲದಲ್ಲಿ ಅವರು ಕೈಗೊಂಡ ಅಭಿವೃದ್ಧಿಯನ್ನು ನೋಡಿದರೆ ಅವರೊಬ್ಬ ಜಾತ್ಯಾತೀತ ವ್ಯಕ್ತಿಯಾಗಿದ್ದರು ಎಂದು ತಿಳಿಯುತ್ತದೆ ಎಂದು ಹೇಳಿದರು.

ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿ ಮಾಡಲಾರರು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಇತಿಹಾಸವನ್ನು ಅರಿತು ತಪ್ಪುಗಳನ್ನು ತಿದ್ದಿಕೊಂಡು ಮನುಷ್ಯರಾಗಿ ಬಾಳುವ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಮಾನವರಾಗಿ ಬದುಕಬೇಕು. ಕೆಂಪೇಗೌಡರು ಅವರ ಆಡಳಿತಾವಧಿಯಲ್ಲಿ ಜಾತಿ ತಾರತಮ್ಯ ಮಾಡಲಿಲ್ಲ. ಬೆಂಗಳೂರು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಕೆಂಪೇಗೌಡರು ಕಾರಣ. ದೂರದೃಷ್ಟಿ ಇಟ್ಟುಕೊಂಡು ಆರ್ಥಿಕ, ಸಾಮಾಜಿಕ ಬೆಳವಣಿಗೆ ಯಾವ ರೀತಿಯಾಗಬೇಕೆಂದು ಅರಿತು, ಎಲ್ಲರಿಗೂ ಆರ್ಥಿಕ ಸಾಮಾಜಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಅವರು ಮಾಡಿದ್ದರು ಎಂದರು.

ಬೆಂಗಳೂರಿನಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲವಾದರೂ ಅನೇಕ ಕೆರೆಗಳನ್ನು ನಿರ್ಮಿಸಿದರು. ಆರ್ಥಿಕವಾಗಿ ಬೆಂಗಳೂರು ಬೆಳೆಯಬೇಕೆಂದು ನಗರದಲ್ಲಿ ಕೆರೆಗಳು, ದೇವಾಲಯಗಳು, ಪೇಟೆಗಳನ್ನು ನಿರ್ಮಾಣ ಮಾಡಿದರು. ಅಂಥ ವ್ಯಕ್ತಿಯನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಅನೇಕ ರಾಜರು, ನಾಡಪ್ರಭುಗಳು ಆಗಿ ಹೋಗಿದ್ದರೂ ಸಮಾಜಮುಖಿಯಾಗಿ ಕೆಲಸ ಮಾಡಿರುವವರನ್ನು ನಾವು ಸ್ಮರಿಸುತ್ತೇವೆ ಹಾಗೂ ಅವರಿಂದ ಪ್ರೇರಣೆ ಹಾಗೂ ಸ್ಪೂರ್ತಿಯನ್ನು ಪಡೆಯುತ್ತೇವೆ. ಅಂತವರಲ್ಲಿ ಕೆಂಪೇಗೌಡರು ಪ್ರಮುಖರು ಎಂದು ತಿಳಿಸಿದರು.

ಕೆಂಪೇಗೌಡರು ಬದುಕಿದ್ದ ಎಲ್ಲಾ ಭಾಗಗಳು ಅಭಿವೃದ್ಧಿಯಾಗಬೇಕೆಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಸ್ವಾಮೀಜಿಯವರ ಸಲಹೆ ಮೇರೆಗೆ ಸ್ಥಾಪಿಸಲಾಯಿತು. ಬೆಂಗಳೂರು ವಿಶ್ವವಿಖ್ಯಾತವಾಗಿದ್ದು, ಬ್ರಾಂಡ್ ಬೆಂಗಳೂರು ಸಾಧ್ಯವಾಗಿಸಲು ನಾವು ಹೊರಟಿದ್ದರೆ ಕೆಂಪೇಗೌಡರು ಕಾರಣ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ್ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಸ್ವಾಮಿಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ಶಾಸಕರು, ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಹಾಗೂ ಇನ್ನಿತರೆ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular