ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಿರುವ ಕುರಿತು ತೀವ್ರ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಅವರು ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಈಗ ಕೊಟ್ಟಿರುವ ಖಾತೆಯನ್ನು ಬದಲಿಸುವಂತೆ ಪಟ್ಟುಹಿಡಿದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಆನಂದ್ ಸಿಂಗ್ ಅವರಿಗೆ ಪರಿಸರ ಖಾತೆ ನೀಡಿದ್ದರು. ಇದಕ್ಕೆ ಆನಂದ್ ಸಿಂಗ್ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿಕೊಂಡು ಬರುತ್ತಿದ್ದು ಖಾತೆ ಬದಲಾವಣೆ ಮಾಡುವಂತೆ ಹಠಕ್ಕೆ ಬಿದ್ದಿದ್ದಾರೆ.
ಕೆಲವು ದಿನಗಳ ಹಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಆನಂದ್ ಸಿಂಗ್ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇದಕ್ಕೆ ಬೊಮ್ಮಾಯಿ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.
ಆದರೆ ತಮ್ಮ ಮನವಿಗೆ ಮುಖ್ಯಮಂತ್ರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದನ್ನು ಗಮನಿಸಿದ ಆನಂದ್ ಸಿಂಗ್ ಇಂದು ರಾಜಿನಾಮೆ ನೀಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಇದರ ನಡುವೆಯೇ ಅಸಮಾಧಾನಿತ ಸಚಿವ ಆನಂದ್ ಸಿಂಗ್ ಮತ್ತು ರಾಜುಗೌಡ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಮತ್ತು ಆನಂದ್ ಸಿಂಗ್ ನಡುವೆ ನಡೆದ ಮಾತುಕತೆ ಏನೆಂಬುದು ಹೊರಬಿದ್ದಿಲ್ಲ. ರಾಜಿಸಂಧಾನದ ಕುರಿತು ಯಾವುದೇ ಮುಖಂಡರು ಮಾಹಿತಿ ನೀಡಿಲ್ಲ.
ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದ ನಂತರ ಆನಂದ್ ಸಿಂಗ್ ಆಪ್ತ ರಾಜುಗೌಡ ಮಾತನಾಡಿ, ಆನಂದ್ ಸಿಂಗ್ ತಮ್ಮ ಮಾತಿಗೆ ಬದ್ದರಾಗಿದ್ದಾರೆ. ಯಡಿಯೂರಪ್ಪ ಅವರು ಸಮಾಧಾನದಿಂದ ಇರುವಂತೆ ಹೇಳಿದ್ದಾರೆ. ದುಡುಕಿನ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದು ಬುದ್ದಿವಾದ ಹೇಳಿದ್ದಾರೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್ ನಮ್ಮ ನಾಯಕರ ಮೇಲೆ ವಿಶ್ವಾಸವಿದೆ. ನನ್ನ ಮೇಲೆ ಅವರಿಗೆ ವಿಶ್ವಾಸ ಇಲ್ಲ ಎಂಬುದು ಕಂಡುಬರುತ್ತದೆ. ಇದು ನನ್ನ ರಾಜಕೀಯ ಭವಿಷ್ಯ ಮುಕ್ತಾಯವೋ, ಇಲ್ಲವೇ ಪುನರಾರಂಭವೋ ಆ ಗೋಪಾಲಕೃಷ್ಣನೇ ಹೇಳಬೇಕು ಎಂದು ಮಾರ್ಮಿಕವಾಗಿ ನುಡಿದರು.
ಈ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಆರ್. ಅಶೋಕ್, ಆನಂದ್ ಸಿಂಗ್ ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ನಾವು ಮಾತನಾಡಿದ್ದೇವೆ. ಸಮಸ್ಯೆ ಇದ್ದರೆ ಮುಖ್ಯಮಂತ್ರಿಗಳು ಅದನ್ನು ಬಗೆಹರಿಸುತ್ತಾರೆ ಎಂದು ಹೇಳಿದರು.