ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಉಂಟಾಗಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. 30ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯ ಮುಂದುವರಿದೆ. ಅವಶೇಷಗಳಡಿ ಸಿಲುಕಿದ್ದ 14 ಮಂದಿ ಗಾಯಗೊಂಡಿದ್ದು ಅವರನ್ನು ರಕ್ಷಿಸಲಾಗಿದೆ.
ರೆಕಾಂಗ್ ಪೀಯಿ ನಗರದಿಂದ ಶಿಮ್ಲಾಕ್ಕೆ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತೆರಳುತ್ತಿತ್ತು. ಆ ಬಸ್ ನಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಭೂ ಕುಸಿತ ಉಂಟಾಗಿ ಬಸ್ ಮಣ್ಣಿನಡಿ ಸಿಲುಕಿದೆ ಎಂದು ದಿ ವೈರ್ ವರದಿ ಮಾಡಿದೆ.
ಬೇರೆ ವಾಹನಗಳು ಕೂಡ ರೆಕಾಂಗ್ ಪಿಯಿ ಯಿಂದ ಶಿಮ್ಲಾ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಿಂಭಾಗದಲ್ಲಿದ್ದ ವಾಹನಗಳು ಕೂಡ ಮಣ್ಣಿನಲ್ಲಿ ಮುಚ್ಚಿಹೋಗಿವೆ ಎಂದು ವರದಿಯಾಗಿದೆ.
ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್ ಕೂಡ ಟ್ವೀಟ್ಟರ್ ನಲ್ಲಿ ಪರ್ವತಶ್ರೇಣಿಯಿಂದ ಕಲ್ಲುಗಳು ಉರುಳಿ ಬರುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದೆ.
ಲೆವಿನ ನೇಯಿತ್ರಿ ಎಂಬ ಮಹಿಳೆ ಭೂಕುಸಿತ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು ಮಣ್ಣಿನಲ್ಲಿ ಸಿಲುಕಿದ್ದಾರೆ. ಅವರು ಸುರಕ್ಷಿತವಾಗಿ ಹೊರಬರಲಿ ಎಂದು ಪ್ರಾರ್ಥಿಸಿದ್ದಾರೆ.
ಜಿಲ್ಲಾಧಿಕಾರಿ ಅಬಿದ್ ಹುವೆ ಸಾದಿಕ್ ಮಾತನಾಡಿ ಮಣ್ಣಿನಡಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ. ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿ, ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ರಕ್ಷಣ ಕಾರ್ಯಕ್ಕೆ ಬೆಟ್ಟದ ಮೇಲಿನಿಂದ ಬೀಳುತ್ತಿರುವ ಕಲ್ಲುಗಳು ಅಡ್ಡಿಪಡಿಸುತ್ತಿವೆ ಎಂದು ಹೇಳಿದ್ದಾರೆ.