ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಇದೇ ಮೊದಲ ಬಾರಿಗೆ ಜನತಾ ದರ್ಶನ ನಡೆಸಿದರು. ಮಹಿಳೆಯರು ಸೇರಿದಂತೆ ನೂರಾರು ಮಂದಿ ಮುಖ್ಯಮಂತ್ರಿಗಳಿಗೆ ಅಹವಾಲುಗಳನ್ನು ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಬಸವರಾಜ ಬೊಮ್ಮಾಯಿ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದರೂ ಜನತಾ ದಳದ ಹಾದಿಯಲ್ಲೇ ಸಾಗುತ್ತಿದ್ದಾರೆಂಬುದಕ್ಕೆ ಜನತಾ ದರ್ಶನ ಸಾಕ್ಷಿಯಾಯಿತು. ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಜನತಾ ದರ್ಶನವನ್ನು ಆರಂಭಿಸಿ ಜನರ ಗಮನವನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನತಾ ದರ್ಶನವನ್ನು ನಡೆಸಿದ್ದರು. ಪ್ರತಿ ವಾರವೂ ಜನತಾ ದರ್ಶನಕ್ಕೆ ಆಗಮಿಸುತ್ತಿದ್ದ ವಿಕಲಚೇತನರು, ನೊಂದವರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಕುಮಾರಸ್ವಾಮಿ ಮುಂದೆ ನೋವನ್ನು ತೋಡಿಕೊಳ್ಳುತ್ತಿದ್ದರು. ಕೆಲವರಿಗೆ ಪರಿಹಾರವನ್ನು ನೀಡಲಾಗಿತ್ತು.
ಈಗ ಬಸವರಾಜ ಬೊಮ್ಮಾಯಿ ಕೂಡ ಜನತಾ ದರ್ಶನವನ್ನು ಆರಂಭಿಸಿದ್ದು ಜನರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮಹಿಳೆಯರು, ವೃದ್ಧರು ಸೇರಿದಂತೆ ಹಲವರು ಸರದಿ ಸಾಲಿನಲ್ಲಿ ನಿಂತು ಬೊಮ್ಮಾಯಿ ಅವರಿಗೆ ತಮ್ಮ ಮನವಿ ಪತ್ರಗಳನ್ನು ನೀಡಿ ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿದರು.