Saturday, July 27, 2024
Google search engine
Homeಜಿಲ್ಲೆಅನಧಿಕೃತ ಶಾಲೆ ಮುಚ್ಚಲು ಮಾನವ ಹಕ್ಕುಗಳ ಸೇವಾ ಕೇಂದ್ರ ಆಗ್ರಹ - ಶಾಲೆ ಮುಚ್ಚಬೇಡಿ ರೂಪ್ಸಾ

ಅನಧಿಕೃತ ಶಾಲೆ ಮುಚ್ಚಲು ಮಾನವ ಹಕ್ಕುಗಳ ಸೇವಾ ಕೇಂದ್ರ ಆಗ್ರಹ – ಶಾಲೆ ಮುಚ್ಚಬೇಡಿ ರೂಪ್ಸಾ

ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೊಲೆಯಂತೆ ಜಿಲ್ಲೆಯ ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗಳಲ್ಲಿರುವ ಅನಧಿಕೃತ ಶಾಲೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಸೇವಾ ಕೇಂದ್ರದ ಸದಸ್ಯರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ವೇಳೆ, ಇದನ್ನು ವಿರೋಧಿಸಿ ರೂಪ್ಸಾ ಕರ್ನಾಟಕ ಹಮ್ಮಿಕೊಂಡಿದ್ದ ಪ್ರತಿಭಟನೆಗಳು ಏಕ ಕಾಲಕ್ಕೆ ನಡೆದು, ಎರಡು ಸಂಘಟನೆಗಳ ಸದಸ್ಯರ ನಡುವೆ ಮಾತಿನ ಚಕಮುಕಿ ನಡೆದ ಘಟನೆ ನಡೆದಿದೆ.

ತುಮಕೂರು ತಾಲೂಕು ಬಿಇಓ ಅವರು ತಾಲೂಕಿನ 14 ಶಾಲೆಗಳನ್ನು ಅನಧಿಕೃತ ಎಂದು ನೊಟೀಸ್ ನೀಡಿ, ಒಂದು ತಿಂಗಳು ಕಳೆದರೂ ಶಾಲೆಗಳ ವಿರುದ್ದ ಯಾವುದೇ ಕ್ರಮವಿಲ್ಲ. ಕೂಡಲೇ ಅನಧಿಕೃತ ಶಾಲೆಗಳ ಮಾನ್ಯತೆ ರದ್ದುಪಡಿಸಿ, ಮಕ್ಕಳ ಪ್ರವೇಶವನ್ನು ತಡೆಯಬೇಕೆಂದು ಆಗ್ರಹಿಸಿ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹವನ್ನು ನಡೆಯಿತು. ಇದೇ ವೇಳೆ ಮಾನವ ಹಕ್ಕುಗಳ ಸೇವಾ ಕೇಂದ್ರ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಸರಿಯಲ್ಲ. ಕೇವಲ ಪ್ರಚಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ರೂಪ್ಸಾ)ಅವರು ಹಾಲನೂರು ಲೇಪಾಕ್ಷ ಅವರ ನೇತೃತ್ವದಲ್ಲಿ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಎರಡು ಸಂಘಟನೆಗಳ ಮುಖಂಡರು ಮತ್ತು ಸದಸ್ಯರ ನಡುವೆ ಮಾತಿನ ಚಕಮುಕಿ ನಡೆಯಿತು.

ಈ ವೇಳೆ ಮಾತನಾಡಿದ ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಸ ಸಿದ್ದಲಿಂಗೇಗೌಡ, ಅನಧಿಕೃತ ಶಾಲೆಗಳಿಗೆ ನೊಟೀಸ್ ನೀಡಿ ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ಒಂದು ವೇಳೆ ಮಕ್ಕಳ ಪ್ರವೇಶ ಪಡೆದ ನಂತರ ಶಾಲೆ ಮುಚ್ಚಿದರೆ, ಆ ಮಕ್ಕಳು ಎಲ್ಲಿಗೆ ಹೋಗಬೇಕು ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ನೊಟೀಸ್ ನೀಡಿ ಅನಧಿಕೃತ ಎಂದು ಘೋಷಿಸಿದ ಮೇಲೆ, ಆ ಶಾಲೆಗೆ ಮಕ್ಕಳು ಸೇರದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ರೂಪ್ಸಾ ಕರ್ನಾಟಕದ ಹಾಲನೂರು ಲೇಪಾಕ್ಷಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳಿಲ್ಲ. ಪ್ರತಿವರ್ಷ ರಿನಿವಲ್ ಆಗದ ಶಾಲೆಗಳಿಗೆ ನೊಟೀಸ್ ನೀಡುವುದು ಸಹಜ. ನೊಟೀಸ್ ನೀಡಿದ ಒಂದು ತಿಂಗಳ ಕಾಲಾವಕಾಶ ಇರುತ್ತದೆ. ಆ ವೇಳೆಯಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿ, ರಿನಿವಲ್ ಮಾಡಿಸಿಕೊಳ್ಳುತ್ತೇವೆ. ಇದು ಪ್ರತಿ ವರ್ಷದ ಪ್ರಕ್ರಿಯೆ. ಈ ಬಾರಿ ಅನ್‌ಲೈನ್ ಅರ್ಜಿ ಕರೆದಿದ್ದು, ಚುನಾವಣೆ ಘೋಷಣೆಯಾದ ಕಾರಣ ಕೆಲ ಕಾಲ ತಂತ್ರಾಂಶವನ್ನು ಇಲಾಖೆಯೇ ಸ್ಥಗಿತ ಮಾಡಿದ್ದರಿಂದ ಈ ಗೊಂದಲ ಉಂಟಾಗಿದೆ ಎಂದರು.

ಈಗಾಗಲೇ ಎಲ್ಲಾ ರೀತಿಯ ಪ್ರಕ್ರಿಯೆ ನಡೆಯುತ್ತಿದೆ. ನಮಗೆ ಜೂನ್ 30ವರೆಗೆ ಸಮಯಾವಕಾಶ ಇರುವುದರಿಂದ ಅಷ್ಟರೊಳಗೆ ನಾವು ರಿನಿವಲ್ ಮಾಡಿಸಿಕೊಳ್ಳುತ್ತವೆ. ನೊಟೀಸ್ ನೀಡಿರುವುದನ್ನೇ ತಪ್ಪಾಗಿ ತಿಳಿದು, ಪ್ರಚಾರದ ಆಸೆಯಿಂದ ಮಾನವ ಹಕ್ಕುಗಳ ಸೇವಾ ಕೇಂದ್ರದವರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ನೊಟೀಸ್ ನೀಡಿರುವ 14 ಶಾಲೆಗಳಲ್ಲಿ ನೂರಾರು ಮಕ್ಕಳು ಕಲಿಯುತ್ತಿದ್ದಾರೆ. ಶಾಲೆ ಮುಚ್ಚಿದರೆ ಅವರ ಗತಿ ಏನು ಎಂದು ಪ್ರಶ್ನಿಸಿದರು.

ರೂಪ್ಸಾ ಕರ್ನಾಟಕ ಮತ್ತು ಮಾನವ ಹಕ್ಕುಗಳ ಸೇವಾ ಕೇಂದ್ರದವರು ಪರಸ್ವರ ಪ್ರತಿಭಟನೆಗೆ ಇಳಿದ ಪರಿಣಾಮ ಸ್ಪಷ್ಟನೆ ನೀಡಿದ ಡಿಡಿಪಿಐ ರಂಗಧಾಮಯ್ಯ, ಶಾಲೆಗಳನ್ನು ಅಧಿಕೃತ, ಅನಧಿಕೃತ ಎಂದು ಘೋಷಿಸುವುದು ಬಿಇಓ ಕೆಲಸ. ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ನೀಡಿದ ಮಾನದಂಡAತೆ ನವೀಕರಿಸುವುದು ನಡೆಯುತ್ತದೆ. ಈ ಬಾರಿ ಕೊಂಚ ವಿಳಂಬವಾಗಿದೆ. ಆಗಿರುವ ತೊಂದರೆಯನ್ನು ಇಲಾಖೆಯ ಗಮನಕ್ಕೆ ತಂದು ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಬಿಇಓ ಅವರಿಗೆ ಸೂಚನೆ ನೀಡಿದ್ದು, ಇಲಾಖೆಯ ಸುತ್ತೊಲೆಯ ಪ್ರಕಾರ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಈ ವೇಳೆ ರೂಪ್ಸಾ ಕರ್ನಾಟಕದ ಶ್ರೀನಿವಾಸ್, ಪ್ರದೀಪ್, ಚಂದ್ರಶೇಖರ್, ಶ್ರೀನಿವಾಸಮೂರ್ತಿ, ಮಾನವ ಹಕ್ಕುಗಳ ಸೇವಾ ಕೇಂದ್ರದ ದರ್ಶನ್, ನವೀನ್, ಅರುಣ್ ಕೃಷ್ಣಯ್ಯ, ಡಮರುಗ ಉಮೇಶ್, ಉಮಾಶಂಕರ್, ಶಶಿಕಿರಣ್ ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular