Friday, November 22, 2024
Google search engine
Homeಮುಖಪುಟಸಚಿವ ಡಾ.ಜಿ.ಪರಮೇಶ್ವರ್ ನಿವಾಸದ ಎದುರು ಪ್ರತಿಭಟನೆ ನಡೆಸಲು ಮುಂದಾದ ಸೊಗಡು ಶಿವಣ್ಣ ಬಂಧನ

ಸಚಿವ ಡಾ.ಜಿ.ಪರಮೇಶ್ವರ್ ನಿವಾಸದ ಎದುರು ಪ್ರತಿಭಟನೆ ನಡೆಸಲು ಮುಂದಾದ ಸೊಗಡು ಶಿವಣ್ಣ ಬಂಧನ

ಹೇಮಾವತಿ ಎಕ್ಸ್ಪ್ರೆಸ್ ಸಂಪರ್ಕ ಕಾಲುವೆ ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ಗೊಲ್ಲಹಳ್ಳಿ ನಿವಾಸದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲು ತೆರಳಿದ್ದ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶಗೌಡ ಸೇರಿದಂತೆ 40ಕ್ಕು ಹೆಚ್ಚು ಮುಖಂಡರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಹೇಮಾವತಿ ಎಕ್ಸ್ಪ್ರೆಸ್ ಸಂಪರ್ಕ ಕಾಲುವೆ ಕಾಮಗಾರಿ ಸ್ಥಗಿತಗೊಳಿಸಿ, ಅವೈಜ್ಞಾನಿಕವಾಗಿರುವ ಈ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರ ತುಮಕೂರು ಹೊರವಲಯದ ಸಿದ್ದಾರ್ಥ ನಗರದ ಮನೆ ಮುಂದೆ ಹೋರಾಟಕ್ಕೆ ಕರೆ ನೀಡಿದ್ದರು. ಅದರಂತೆ ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪ್ರತಿಭಟನಾ ಸ್ಥಳದ ಸಿದ್ದತೆಗಳ ಪರಿಶೀಲನೆಗೆ ಮುಖಂಡರಾದ ಪ್ರಭಾಕರ್ ಅವರೊಂದಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸಚಿವ ಡಾ.ಜಿ.ಪರಮೇಶ್ವರ್ ಅವರ ಗೊಲ್ಲಹಳ್ಳಿಯ ನಿವಾಸದ ಬಳಿ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿ,ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದ ಬಳಿ ಕರೆತಂದರು.

ನಮ್ಮ ಜಿಲ್ಲೆಯ ನೀರನ್ನು ಅವೈಜ್ಞಾನಿಕ ಯೋಜನೆಯ ಮೂಲಕ ಬೇರೊಂದು ಜಿಲ್ಲೆಗೆ ತೆಗೆದುಕೊಂಡು ಹೋಗಲು ಹೊರಟಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಕ್ಕೆ ಒತ್ತಾಯಿಸಿ, ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ನಮ್ಮನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಇದು ಖಂಡನೀಯ ಎಂದು ಡಿ.ಆರ್.ಗ್ರೌಂಡ್‌ನಲ್ಲಿಯೇ ಮಾಜಿ ಸಚಿವ ಸೊಗಡು ಶಿವಣ್ಣ ಉಪಹಾರ, ನೀರು ಸೇವಿಸದೆ ಧರಣಿ ನಡೆಸಿದರು.

ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ವಿಡಿಯೋ ಮಾಡಿ, ಮೊಬೈಲ್ ಕಸಿದು ನಮ್ಮನ್ನು ಬೇರೊಂದು ರೀತಿಯಲ್ಲಿ ಪೊಲೀಸರು ಪ್ರಚೋದಿಸುತ್ತಿದ್ದಾರೆ. ಆಧುನಿಕ ಚಾಲನ್ ಮೂಲಕ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲು ನಾವೇ ಮುಂದೆ ನಿಂತು ಸಹಕರಿಸುತ್ತೇನೆ. ಆದರೆ ಪೈಪ್‌ಲೈನ್ ಮೂಲಕ ನೀರು ಕೊಂಡೊಯ್ಯಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣರವರನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ ಹಾಗೂ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಡಿಎಆರ್ ಕಚೇರಿ ಮುಂದೆ ಕಪುö್ಪಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಡಿಎಆರ್ ಕಚೇರಿ ಮುಂಭಾಗ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದ ಮುಖಂಡರಾದ ಧನಿಯಾಕುಮಾರ್, ಕೆ.ಪಿ. ಮಹೇಶ್, ಕುಮಾರಸ್ವಾಮಿ, ಶಬ್ಬೀರ್, ರಾಮಚಂದ್ರರಾವ್, ನವೀನ್, ಶಂಕರಪ್ಪ, ಏಕಾಂತಯ್ಯ, ಜಯಪ್ರಕಾಶ್, ನಾರಾಯಣರಾವ್, ಊರುಕೆರೆ ನಂಜುಂಡಪ್ಪ, ಟಿ.ಜೆ.ಸನತ್, ಗಣೇಶ್ ಸೇರಿದಂತೆ ಮತ್ತಿತರರನ್ನು ಎಸ್ಪಿ ಅಶೋಕ್ ಸೂಚನೆ ಮೇರೆಗೆ ಪೊಲೀಸರು ಬಂಧಿಸಿದರು.

ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುವುದನ್ನು ತಡೆಯುವ ಸಲುವಾಗಿ ಗುರುವಾರ ಬೆಳಗ್ಗೆಯಿಂದಲೇ ಪೊಲೀಸರು ತುಮಕೂರು ಗ್ರಾಮಾಂತರ ಶಾಸಕ ಬಿಜೆಪಿಯ ಬಿ.ಸುರೇಶಗೌಡ ಅವರನ್ನು ಬಂಧಿಸಲು ಕುಣಿಗಲ್ ರಸ್ತೆಯ ಬಾಣಾವಾರ ಸಮೀಪದ ಬಿಜೆಪಿ ಕಚೇರಿ ಬಳಿ ತೆರಳಿದ್ದರು. ಆದರೆ ಪೊಲೀಸರ ಕಣ್ತಪ್ಪಿಸಿ, ಕಾರು ಬಿಟ್ಟು ತಲೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ಏರಿ ಗೊಲ್ಲಹಳ್ಳಿಯಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆ ತಲುಪಿದ ಶಾಸಕರು, ವಾಹನದಿಂದ ಇಳಿದು ದಿಕ್ಕಾರ ಕೂಗುತಿದ್ದಂತೆಯೇ ಆವರನ್ನು ಬಂಧಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆತರಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular