Saturday, July 27, 2024
Google search engine
Homeಮುಖಪುಟಶೆಡ್ ಧ್ವಂಸಗೊಳಿಸಿದ ಪಾಲಿಕೆ-ಬೀದಿಪಾಲಾದ ಬಡವರ ಗೋಳು ಕೇಳೋರ್ಯಾರು?

ಶೆಡ್ ಧ್ವಂಸಗೊಳಿಸಿದ ಪಾಲಿಕೆ-ಬೀದಿಪಾಲಾದ ಬಡವರ ಗೋಳು ಕೇಳೋರ್ಯಾರು?

ರಾತ್ರೋರಾತ್ರಿ ಮಹಾನಗರ ಪಾಲಿಕೆಯ ಸಿಬ್ಬಂದಿ ಬಡವರು ಹಾಕಿಕೊಂಡಿದ್ದ ಶೆಡ್‌ಗಳನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮಗೊಳಿಸಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ನಗರದ 29ನೇ ವಾರ್ಡ್ ವ್ಯಾಪ್ತಿಯಲ್ಲಿ ಮರಳೂರಿಗೆ ಸೇರುವ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಕಾಲೇಜು ಕಟ್ಟಡಕ್ಕೆ ಹಾಗೂ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಜಾಗದಲ್ಲಿ ಹಾಕಿಕೊಂಡಿದ್ದ ಶೆಡ್‌ಗಳನ್ನು ಜೆಸಿಬಿ ಯಂತ್ರಗಳ ಮೂಲಕ ಧ್ವಂಸಗೊಳಿಸಲಾಗಿದ್ದು ನಿವಾಸಿಗಳು ಸೂರಿಲ್ಲದೆ ಬಯಲಿನಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾನಗರ ಪಾಲಿಕೆ ಅಧಿಕಾರಿಗಳು ನಡುರಾತ್ರಿ ಏಕಾಏಕಿ ಯಾವುದೇ ನೋಟಿಸ್ ನೀಡದೆ ಧ್ವಂಸ ಮಾಡಿರುವ ಶೆಡ್‌ಗಳ ಜಾಗ ಸತೀಶ್ ಎಂಬುವರಿಗೆ ಸೇರಿದ್ದಾಗಿದ್ದು, ಇವರ ಕುಟುಂಬಕ್ಕೆ ಈ ಜಾಗ ಪಿತ್ರಾರ್ಜಿತವಾಗಿ ಬಂದಿದೆ ಎನ್ನಲಾಗಿದೆ. ಸರ್ವೆ ನಂ. 87/1ಎ ಯಲ್ಲಿ 1 ಎಕರೆ 34 ಗುಂಟೆ ಜಮೀನು ಸತ್ತಿಗಮ್ಮ ಎಂಬುವರಿಗೆ 1972 ರಲ್ಲಿ ರಿಲೀಸ್ ಡೀಡ್ ಮುಖೇನ ಬಂದಿದ್ದು, 1973 ರಿಂದ 2010-11ರ ವರೆಗೂ ಸತ್ತಿಗಮ್ಮ ಅವರ ಹೆಸರಿನಲ್ಲಿ ಖಾತೆ ಪಹಣಿ ಇದೆ. 2010-11 ರ ಬಳಿಕ ಸತ್ತಿಗಮ್ಮ ನಿಧನರಾಗಿದ್ದು, ಇವರ ಮೊಮ್ಮಗ ಕೋಂದಡರಾಮಯ್ಯ ಎಂಬುವರ ಹೆಸರಿಗೆ ಖಾತೆ, ಪಹಣಿ ವರ್ಗಾವಣೆ ಮಾಡಿ ತಹಶೀಲ್ದಾರ್ ಆದೇಶ ಸಹ ಮಾಡಿದ್ದಾರೆ. ಇದಾದ ಬಳಿಕ ಕೋದಂಡರಾಮಯ್ಯನವರು ತಮ್ಮ ಪತ್ನಿ ಗಂಗಮ್ಮನ ಹೆಸರಿಗೆ ಈ ಜಮೀನನ್ನು ದಾನ ಪತ್ರ ಬರೆದಿದ್ದಾರೆ. ನಂತರ ಗಂಗಮ್ಮ ಅವರು ತನ್ನ ಅಣ್ಣನ ಪತ್ನಿ ಗಿರಿಜಮ್ಮನವರಿಗೆ 22 ಗುಂಟೆ ಜಮೀನನ್ನು ಕ್ರಯಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

22 ಗುಂಟೆ ಜಮೀನು ಖರೀದಿಸಿರುವ ಗಿರಿಜಮ್ಮ ಅವರು ಆ ಜಾಗವನ್ನು ಡಿಸಿ ಕನ್ವರ್ಷನ್ ಮತ್ತು ಟೂಡಾ ಅನುಮೋದನೆ ಸಹ ಪಡೆದುಕೊಂಡು ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಜಮೀನಿನ ಮಾಲೀಕ ಸತೀಶ್ ತಿಳಿಸಿದ್ದಾರೆ.

ಇಷ್ಟೆಲ್ಲಾ ಇದ್ದರೂ ಮಹಾನಗರ ಪಾಲಿಕೆಯವರು ನಮಗೆ ಮಹಾರಾಜರು ಬರೆದುಕೊಟ್ಟಿರುವ ಜಾಗ ಎಂದು ದಬ್ಬಾಳಿಕೆ, ದೌರ್ಜನ್ಯದಿಂದ ರಾತ್ರೋರಾತ್ರಿ ಜೆಸಿಬಿ ಯಂತ್ರಗಳನ್ನು ತಂದು ಶೆಡ್‌ಗಳನ್ನು ಧ್ವಂಸ ಮಾಡಿದ್ದಾರೆ. ಸುಮಾರು 200ಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನೊಂದಿಗೆ ನಮ್ಮನ್ನು ಬೀದಿಗೆ ಹಾಕಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ರಕ್ಷಣೆಯಲ್ಲಿ ಜೆಸಿಬಿ ಯಂತ್ರಗಳೊಂದಿಗೆ ಸರ್ವೆ ನಂ. 87/1ಎ ಜಾಗಕ್ಕೆ ತೆರಳಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಸತೀಶ್ ಎಂಬುವರಿಗೆ ಸೇರಿದೆ ಎನ್ನಲಾದ ಜಾಗದಲ್ಲಿದ್ದ ಶೆಡ್‌ಗಳಲ್ಲಿ ವಾಸವಾಗಿದ್ದ ಮಹಿಳೆಯರು, ಮಕ್ಕಳು, ವೃದ್ಧರನ್ನು ಮಧ್ಯರಾತ್ರಿ ಅನಾಗರಿಕರಂತೆ ಹೊರದಬ್ಬಿ, ಅದರೊಳಗಿದ್ದ ಸಾಮಗ್ರಿಗಳನ್ನು ಹೊರಗೆ ಎಸೆದು ಶೆಡ್‌ಗಳನ್ನು ಧ್ವಂಸ ಮಾಡಿರುವ ಕ್ರಮವನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ.

ಕಳೆದ 15-16 ವರ್ಷಗಳಿಂದ ನಾವು ಇಲ್ಲಿಯೇ ಶೆಡ್ ಹಾಕಿಕೊಂಡು ವಾಸವಿದ್ದೇವೆ, ಜತೆಗೆ ಟೀ ಅಂಗಡಿ ಸೇರಿದಂತೆ ಇತರೆ ಅಂಗಡಿಗಳನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದೇವೆ. ಇದು ನಮ್ಮ ಪಿತ್ರಾರ್ಜಿತ ಆಸ್ತಿ, ಈ ಸ್ವತ್ತಿನ ಮೇಲೆ ಯಾರ ಹಕ್ಕೂ ಇಲ್ಲ. ನಮ್ಮ ದಾಖಲಾತಿ ನೋಡುವ ವ್ಯವದಾನವೂ ಈ ಅಧಿಕಾರಿಗಳಿಗಿಲ್ಲ. ದೌರ್ಜನ್ಯ ರೀತಿಯಲ್ಲಿ ನಮ್ಮನ್ನು ಆಚೆ ಹಾಕಿ ಶೆಡ್‌ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಈ ಶೆಡ್‌ಗಳಲ್ಲಿ ವಾಸವಿದ್ದ ಕುಟುಂಬಗಳು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular