ಕರ್ನಾಟಕ ರಾಜ್ಯ ಅಲೆಮಾರಿ/ ಅರೆ ಅಲೆಮಾರಿ ನೂರಾರು ಸಮುದಾಯಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿತರಕ್ಷಣೆಗಾಗಿ ಇಡೀ ರಾಜ್ಯದ್ಯಂತ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ವತಿಯಿಂದ ಶ್ರಮಿಸುತ್ತಿರುವ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಪ್ರದೇಶ ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿಯ ರಾಜ್ಯಾಧ್ಯಕ್ಷರಾಗಿರುವ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷರಾದ ಡಾ.ಸಿ. ಎಸ್. ದ್ವಾರಕನಾಥ್ ಅವರನ್ನು ಎಂಎಲ್ಸಿ ಮಾಡಬೇಕೆಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆ ಮತ್ತು ವಿಧಾನಪರಿಷತ್ ಸೃಷ್ಟಿ ಆದಾಗಿನಿಂದಲೂ ಅಲೆಮಾರಿ/ಆದಿವಾಸಿ ಸಮುದಾಯದ ಪ್ರತಿನಿದಿಗಳು ಎರಡೂ ಸದನಗಳಲ್ಲಿ ಅಸಂಘಟಿತ ಸಮುದಾಯಗಳನ್ನು ಕುರಿತು ಮಾತನಾಡುವವರು ಆಯ್ಕೆಯಾಗಿರುವ ನಿದರ್ಶನಗಳಿಲ್ಲ. ಆದಿವಾಸಿಗಳು, ಅರೆಮಾರಿಗಳು/ ಬುಡಕಟ್ಟು ಜನರು ಆದಿವಾಸಿಗಳು ಈವರೆಗೂ ಇದನ್ನು ಗಮನಿಸಿಕೊಂಡಿಲ್ಲ. ಅವರ ನೋವು, ಅಸಹಾಯಕತೆ ಮತ್ತು ಸಮಸ್ಯೆಗಳ ಕುರಿತಂತೆ ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಈವರೆಗೂ ಯಾವುದೇ ಚರ್ಚೆಗಳೂ ನಡೆಯುತ್ತಿಲ್ಲ.
ಇವರ ಸಮಸ್ಯೆಗಳ ಕುರಿತು ಸರ್ಕಾರ ಗಮನಿಸಬೇಕಾಗಿತ್ತು. ಅದೂ ಅಲ್ಲದೆ ಅಲೆಮಾರಿ/ ಅಲೆಮಾರಿಗಳು ನಿರ್ಗತಿಕರಾಗಿಯೇ ಉಳಿದಿದ್ದಾರೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಉಜ್ಜಜ್ಜಿ ರಾಜಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.
ಶಾಸನವನ್ನು ರೂಪಿಸುವ ಜಾಗಕ್ಕೆ ನೀವು ಹೋಗದ ಹೊರತು ನಿಮ್ಮ ಸಮಸ್ಯೆಗಳು ಪರಿಹಾರವಾಗಲಾರವು ಎಂದು ಡಾ. ಬಿ. ಆರ್ ಅಂಬೇಡ್ಕರ್ ರವರು ಹೇಳುತ್ತಾರೆ. ಆದರೆ ಹಣಬಲ, ಜಾತಿಬಲ, ಸಂಘಟನೆಯ ಬಲ ಯಾವುದೂ ಇಲ್ಲದ ಅಲೆಮಾರಿ/ ಅರೆ ಅಲೆಮಾರಿಗಳು ವಿಧಾನಸಭೆ, ವಿಧಾನಪರಿಷತ್ ಗಳಿಗೆ ಹೇಗೆ ಹೋಗಲು ಸಾಧ್ಯ? ಎಂದು ಪ್ರಶ್ನಿಸಿರುವ ಅವರು, ಕರ್ನಾಟಕದ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಪ್ರತಿನಿಧಿಯಾಗಿ ಡಾ.ಸಿ.ಎಸ್.ದ್ವಾರಕಾನಾಥ್ ಅವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಡಾ. ಸಿ. ಎಸ್. ದ್ವಾರಕಾನಾಥ್ ಅವರು ಕಳೆದ ಮೂರುನಾಲ್ಕು ದಶಕಗಳಿಂದ ಅಲೆಮಾರಿ ಮತ್ತು ಆದಿವಾಸಿ ಸಮಸ್ಯೆಗಳ ಕುರಿತಂತೆ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ಈ ಅಸಂಘಟಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತಿದ್ದಾರೆ. ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು, ಆದಿವಾಸಿ ಸಮುದಾಯಗಳ ಬಗ್ಗೆ ಅವರಿಗೆ ಅಪಾರವಾದ ಮಾಹಿತಿ ಮತ್ತು ಅರಿವು ಹಾಗು ಅದ್ಯಯನವಿದೆ.
ಸುಮಾರು 48 ಸಮುದಾಯಗಳ ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರಾಗಿ, ಸರ್ಕಾರದ ‘ಡಾ.ಅಂಬೇಡ್ಕರ್ ಸಂಶೋದನ ಸಂಸ್ಥೆ’ಗೆ ಕೆಲಸ ಮಾಡಿ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷರಾಗಿ ಹಿಂದುಳಿದ ವರ್ಗಗಳ ಪ್ರವರ್ಗ- 1 ರಲ್ಲಿರುವ 46 ಅಲೆಮಾರಿ ಸಮುದಾಯಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಗಳನ್ನು ಗುರುತಿಸಿ ದಾಖಲಿಸಿದ್ದಾರೆ. ಸರ್ಕಾರಕ್ಕೆ ಅವುಗಳ ಮಾಹಿತಿ ಪೂರ್ಣ ಅಧ್ಯಯನ ವರದಿಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಮೊಟ್ಟಮೊದಲ ಸಲ ಅಲೆಮಾರಿ ಪಟ್ಟಿ ಪ್ರಕಟಿಸಲು ಕಾರಣರಾದ ಹಾಗೂ ರಾಜ್ಯದ ಹಿರಿಯ ಕಾನೂನು ತಜ್ಞರಾದ ಡಾ ಸಿ ಎಸ್ ದ್ವಾರಕನಾಥ್ ಅವರು ‘ಅಲೆಮಾರಿ ಅಭಿವೃದ್ಧಿ ನಿಗಮ, ಅಲೆಮಾರಿ ಅಭಿವೃದ್ಧಿ ಕೋಶ, ಈಗ ಬಜೆಟ್ ನಲ್ಲಿ ಪ್ರಕಟವಾದ ಅಲೆಮಾರಿ ಆಯೋಗ ರಚಿಸಲು ಕೂಡ ಮೂಲ ಕಾರಣಕರ್ತರಾಗಿದ್ದಾರೆ ಎಂದಿದ್ದಾರೆ.
ನಾಡಿನಾದ್ಯಂತ ಮೂಲೆಮೂಲೆಗಳಿಂದ ದಿಕ್ಕಿಲ್ಲದೆ ಬರುವ ಅಲೆಮಾರಿಗಳ ಜಾತಿ ಸರ್ಟಿಫಿಕೇಟ್, ಸಾಲ ಸೌಲಭ್ಯಗಳು, ನಿವೇಶನ, ಭೂಮಿ, ಅನುದಾನ, ಸವಲತ್ತು ಕಾನೂನು ನೆರವುಗಳನ್ನು ಕೊಡಿಸಲು ಹೋರಾಡುವ ಮೂಲಕ ಇಂದಿಗೂ ಸಹ ರಾಜ್ಯಾದ್ಯಂತ ಹಿರಿಯರಾದ ಡಾ.ಸಿ. ಎಸ್. ದ್ವಾರಕನಾಥ್ ಅವರು ಅಲೆಮಾರಿ/ ಅರೆಅಲೆಮಾರಿ, ಆದಿವಾಸಿ, ಬುಡಕಟ್ಟು ಜನರ ನೆಲೆಗಳಿಗೆ ಪ್ರವಾಸ ಕೈಗೊಳ್ಳುವ ಮೂಲಕ ನೊಂದ ಜನರ ಕುಂದುಕೊರತೆಗಳನ್ನು ಅರಿತವರಾಗಿ ಕೆಲಸ ಮಾಡುತ್ತಿದ್ದಾರೆ. ಅಲೆಮಾರಿ, ಆದಿವಾಸಿಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತಂತೆ ನಿರಂತರ ಪ್ರವಾಸ, ಅಧ್ಯಯನ, ಚರ್ಚೆ, ಸಮಾಲೋಚನೆ, ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿರುತ್ತಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ದ್ವಾರಕಾನಾಥ್ ಅವರು ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಕುರಿತು ಆಳವಾದ ಪ್ರೀತಿ, ಕಾಳಜಿ, ಅರಿವು ಮತ್ತು ಜ್ಞಾನ ಉಳ್ಳವರು.ಈ ಸಮುದಾಯಗಳನ್ನು ವಿಧಾನಪರಿಷತ್ ನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು. ಈ ಕಾರಣಕ್ಕೆ ದ್ವಾರಕಾನಾಥ್ ಅವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ರಾಷ್ಟ್ರೀಯ ಹಿರಿಯ ನಾಯಕರು, ಮುತ್ಸದ್ದಿ ರಾಜಕೀಯ ನೇತಾರರು ಆದ ಮಲ್ಲಿಕಾರ್ಜುನ ಖರ್ಗೆಯವರು, ಮುತ್ಸದ್ದಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅದ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ರವರು ಆದ್ಯತೆಯ ಮೇರೆಗೆ ಗಮನಿಸಿ ಡಾ. ಸಿಎಸ್ ದ್ವಾರಕನಾಥ್ ಅವರನ್ನು ವಿಧಾನಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವಂತೆ ಒತ್ತಾಯಿಸಿದ್ದಾರೆ.