Friday, September 20, 2024
Google search engine
Homeಮುಖಪುಟಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕಾಲುವೆ ಕಾಮಗಾರಿಗೆ ಪೈಪ್ ತಂದ ಲಾರಿಗೆ ಅಡ್ಡ ಮಲಗಿದ ಎಂಟಿಕೆ,...

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕಾಲುವೆ ಕಾಮಗಾರಿಗೆ ಪೈಪ್ ತಂದ ಲಾರಿಗೆ ಅಡ್ಡ ಮಲಗಿದ ಎಂಟಿಕೆ, ಸೊಗಡು ಶಿವಣ್ಣ

ಹೇಮಾವತಿ ನೀರು ಮಾಗಡಿಗೆ ಹರಿಸುವ ಲಿಂಕ್ ಕೆನಾಲ್ ಕಾಮಗಾರಿಯನ್ನು ಮುಂದುವರೆಸಲು ಬೃಹತ್ ಗಾತ್ರದ ಪೈಪ್ ಗಳನ್ನು ತುಂಬಿಕೊಂಡು ಬಂದ ಲಾರಿಗಳಿಗೆ ರೈತರು, ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅಡ್ಡ ಮಲಗಿ ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿ ಹೊಸಹಳ್ಳಿ ಕ್ರಾಸ್ ಬಳಿ ದೊಡ್ಡ ಪೈಪ್ ಹೊತ್ತ 25 ಲಾರಿಗಳು ಪ್ರತ್ಯಕ್ಷವಾಗಿರುವುದು ಕಂಡ ಸ್ಥಳೀಯ ರೈತರು ಶಾಸಕರಿಗೆ ಮಾಹಿತಿ ತಿಳಿಸಿದರು. ಕೂಡಲೇ ನೂರಾರು ಮಂದಿ ಜಮಾಯಿಸಿ ಹೆಬ್ಬೂರು ರಸ್ತೆಯಲ್ಲಿ ಕುಳಿತು ಕೆಲ ಕಾಲ ಪತಿಭಟನೆ ನಡೆಸಿದರು. ಬಳಿಕ ಲಾರಿಗಳನ್ನು ತಡೆದು ಮರಳಿ ವಾಪಸ್ ಹೋಗುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಯಾವುದೇ ರೀತಿ ರೈತರಿಗೆ ನೋಟಿಸ್ ನೀಡದೆ ಭೂ ವಶಕ್ಕೆ ಪ್ರಕ್ರಿಯೆ ನಡೆಸದೆ ಏಕಾಏಕಿ ಕಾಮಗಾರಿ ಮಾಡಿರುವುದೇ ಇಂಜಿನಿಯರ್ ಗಳ ಕಮಿಷನ್ ಆಟವಾಗಿದೆ. ಕಂದಾಯ ಇಲಾಖೆಯಿಂದ ಅನುಮತಿ ಸಿಗದೇ ಕೆಲಸ ಆರಂಭಿಸಿರುವ ಅಧಿಕಾರಿಗಳು ಸರ್ಕಾರದ ಕೈ ಗೊಂಬೆಯಾಗಿದ್ದಾರೆ. ಈ ಕೆಲಸ ನಿಲ್ಲಿಸಲು ಗೃಹ ಸಚಿವರು ಹೇಳಿದ್ದರೂ ಕಿಂಚಿತ್ತೂ ಬೆಲೆ ಸಿಗದ ಈ ಸಮಯದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.

ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯಿಂದ ರಾಜಕೀಯ ಶಕ್ತಿ ಪಡೆದ ಶಾಸಕ ಶ್ರೀನಿವಾಸ್ ಅವರು ಹೋಬಳಿಗೆ ನೀರಿನ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಕೆಲಸ ನಿಲ್ಲಿಸಬೇಕಿತ್ತು. ನಮ್ಮ ಹೋರಾಟಕ್ಕೆ ಕೈ ಜೋಡಿಸದೆ ಪ್ರತ್ಯೇಕ ಹೋರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಾವು ನಿಮ್ಮ ಹೋರಾಟಕ್ಕೆ ಬರುತ್ತೇವೆ. ನೀರು ಉಳಿಸಿಕೊಳ್ಳುವುದು ನಮಗೆ ಮುಖ್ಯ. ತಾಕತ್ತು ನನಗಿದೆ. ಗುಬ್ಬಿಗೆ ಬರುತ್ತೇನೆ. ಯಾರಿಗೂ ಹೆದರಲ್ಲ. ಹೋರಾಟಗಾರನಾಗಿ ಬಂದವನು ನಾನು. ಈ ಗುಳ್ಳೆನರಿ ಬುದ್ದಿ ನನಗಿಲ್ಲ. ಮೊದಲು ಈ ಕಳ್ಳಾಟ ಬಿಟ್ಟು ಜಿಲ್ಲೆಯ ಜನರ ಪರ ನಿಂತು ನೀರು ಉಳಿಸುವ ಕೆಲಸ ಮಾಡಿ ಎಂದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಕಾನೂನು ಕೈಗೆತ್ತಿಕೊಳ್ಳಲು ಅಧಿಕಾರಿಗಳೇ ಪ್ರಚೋದನೆ ನೀಡುತ್ತಿದ್ದಾರೆ. ಕೆಲಸ ನಿಲ್ಲಿಸಲು ಒಪ್ಪಿ ಮೂರೇ ದಿನದಲ್ಲಿ ಕೆಲಸಕ್ಕೆ ದೊಡ್ಡ ಪೈಪ್ ತರಿಸಿರುವ ಇಂಜಿನಿಯರ್ ಇಲ್ಲಿಗೆ ಬಂದ್ರೆ ಜನ ಗ್ರಹಚಾರ ಬಿಡಿಸುತ್ತಾರೆ. ಆಗ ನಡೆಯುವ ಅನಾಹುತಕ್ಕೆ ಸರ್ಕಾರ ನೇರ ಹೊಣೆ. ಕುಣಿಗಲ್, ಮಾಗಡಿ ಜನರು ನಮ್ಮವರೇ. ಆದರೆ ಮುಖ್ಯ ನಾಲೆಯ ಮೂಲಕ ನೀರು ತೆಗೆದುಕೊಂಡು ಹೋಗಲಿ. ಇಲ್ಲವಾದಲ್ಲಿ ನಾಗಮಂಗಲ ಮೂಲಕ ಕಾವೇರಿ ಪಡೆಯಲಿ, ಎತ್ತಿನಹೊಳೆ ನೀರು ಪಡೆಯಲಿ ಅದು ಬಿಟ್ಟು ರೈತರನ್ನು ಹಾಳು ಮಾಡುವ ಈ ವಾಮಮಾರ್ಗ ಬೇಕಿರಲಿಲ್ಲ. ಈ ಯೋಜನೆ ಅವೈಜ್ಞಾನಿಕ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಲಾಗಿದೆ ಆದರೂ ಇಬ್ಬರು ಸಚಿವರು ಕೈ ಚೆಲ್ಲಿದ್ದಾರೆ ಎಂದು ತಿಳಿಸಿದರು.

ಲಾರಿಗೆ ಅಡ್ಡಲಾಗಿ ಮಲಗಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಸಮಾಧಾನ ಪಡಿಸುವುದು ಕಷ್ಟವಾಯಿತು. ರಸ್ತೆ ಧರಣಿ ನಂತರ ವೇ ಬ್ರಿಡ್ಜ್ ಬಳಿ ನಿಂತಿದ್ದ ಕೆಲಸದ ಶೆಡ್ ಬಳಿ ತೆರಳಿದ ರೈತರು ಲಾರಿಗಳನ್ನು ವಾಪಸ್ ಕಳುಹಿಸುವ ಕೆಲಸ ಮಾಡಿದರು. ಆಕ್ರೋಶ ಭರಿತ ರೈತರ ಕೂಗಾಟ ಕೆಲ ಕಾಲ ಉದ್ವಿಗ್ನ ವಾತಾವರಣ ತಂದಿತ್ತು. ಪೊಲೀಸರು ಮುನ್ನೆಚ್ಚರಿಕೆ ವಹಿಸಿ ರೈತರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದರು.

ಪ್ರತಿಭಟನೆಯಲ್ಲಿ ಶಾಸಕರ ಪುತ್ರರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್ ಕೃಷ್ಣಪ್ಪ, ಮುಖಂಡ ನಂಜೇಗೌಡ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಹೋಬಳಿ ಅಧ್ಯಕ್ಷ ಜಗದೀಶ್, ಯುವ ಘಟಕದ ಅಧ್ಯಕ್ಷ ನವೀನ್, ಮುಖಂಡರಾದ ಸುಶಾಂತ್, ಬೀರಮಾರನಹಳ್ಳಿ ನರಸೇಗೌಡ, ವೀರಣ್ಣಗುಡಿ ರಾಮಣ್ಣ, ತಮ್ಮಯ್ಯ, ಹರಿವೇಸಂದ್ರ ಕೃಷ್ಣ, ಹಿಂಡಿಸ್ಕೆರೆ ಪ್ರಕಾಶ್ ಮೊದಲಾದವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular