ಹೇಮಾವತಿ ಎಕ್ಸ್ಪ್ರೆಕ್ಸ್ ಲಿಂಕ್ ಕಾಲುವೆ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯಿಂದ ಜಿಲ್ಲೆಗೆ ಏನೆಲ್ಲಾ ತೊಂದರೆಯಾಗುತ್ತದೆ ಎಂಬ ಬಗ್ಗೆ ನಾನು ಮತ್ತು ಸಚಿವ ರಾಜಣ್ಣನವರು ಸಚಿವ ಸಂಪುಟ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಆದರೆ ಸಂಪುಟ ನಮ್ಮೊಬ್ಬರದ್ದೇ ಅಲ್ಲವಲ್ಲ ಎಂದರು.
ಈ ಬಗ್ಗೆ ಸಚಿವ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿ ಈ ಲಿಂಕ್ ಕೆನಾಲ್ ಮಾಡಬಹುದು ಎಂದು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದು ಸರ್ಕಾರದ ತೀರ್ಮಾನ, ನನ್ನ ತೀರ್ಮಾನವಲ್ಲ ಎಂದು ಸ್ಪಷ್ಟಪಡಿಸಿದರು.
ಗುಬ್ಬಿ, ತುರುವೇಕೆರೆ, ತಿಪಟೂರಿಗೆ ಕುಡಿಯುವ ನೀರಿಗೆ ಹಂಚಿಕೆಯಾಗಿದೆ. ಇಲ್ಲಿಂದ ಮುಂದೆ ಕುಣಿಗಲ್ ಕೆರೆಗೂ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಮಧ್ಯೆದಲ್ಲಿ ಹೆಬ್ಬೂರಿಗೂ ಏತನೀರಾವರಿ ಮೂಲಕ ನೀರು ಹರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಗುಬ್ಬಿ ತಾಲೂಕಿನ ಡಿ. ರಾಂಪುರದ ಬಳಿ ಇರುವ 70ನೇ ಕಿ.ಮೀ.ನಿಂದ ನೇರವಾಗಿ ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಬೇಕೆಂದು ಕಳೆದ ಐದಾರು ವರ್ಷಗಳಿಂದ ಪ್ರಸ್ತಾವನೆ ಇದೆ. ಇದಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಈ ಬಾರಿ ಸಂಪುಟದಲ್ಲಿ ವಿಷಯ ಮಂಡಿಸಿ, ಸರ್ಕಾರ ಎಕ್ಸ್ಪ್ರೆಸ್ ಕೆನಾಲ್ ಮಾಡಬಹುದು ಎಂದು ತೀರ್ಮಾನ ತೆಗೆದುಕೊಂಡಿದೆ ಎಂದರು.