ತುಮಕೂರು ಜಿಲ್ಲೆಗೆ ಮಂಜೂರಾಗಿರುವ 24 ಟಿ.ಎಂ.ಸಿ ನೀರಿನಲ್ಲಿಯೇ ಎಕ್ಸ್ಪ್ರೆಸ್ ಕೇನಾಲ್ ಮೂಲಕ ರಾಮನಗರ ಜಿಲ್ಲೆ ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಶ್ರೀರಂಗ ಏತನೀರಾವರಿ ಯೋಜನೆಯ ಕಾಮಗಾರಿಯನ್ನು ಮೇ.15ರೊಳಗೆ ಸಂಪೂರ್ಣವಾಗಿ ಸ್ಥಗಿತಗೊಳಿಸದಿದ್ದರೆ, ಮೇ.16ರಿಂದ ತುಮಕೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ರೈತ ಸಂಘಟನೆಗಳು, ಮಠಾಧೀಶರುಗಳು ಪಕ್ಷಾತೀತವಾಗಿ ಎಕ್ಸ್ಪ್ರೆಸ್ ಕೇನಾಲ್ ಮುಚ್ಚುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಎಂ.ಟಿ.ಕೃಷ್ಣಪ್ಪ, ಬಿ.ಸುರೇಶ್ ಗೌಡ, ಮಾಜಿ ಶಾಸಕ ಎಚ್.ನಿಂಗಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಜಲಾಶಯದಿಂದ ಕುಣಿಗಲ್ ತಾಲೂಕಿಗೆ 3 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದು, ನಾಲೆಯ 0.241 ಕಿ.ಮಿ.ವರೆಗೆ ನೀರು ತೆಗೆದುಕೊಂಡು ಹೋಗಲು ಸುಮಾರು 751 ಕೋಟಿ ರೂಗಳನ್ನು ಖರ್ಚು ಮಾಡಿ 72-241ರವರೆಗೆ ನಾಲೆಯ ಅಧುನೀಕರಣ ಕಾಮಗಾರಿ ಸಹ ಚಾಲ್ತಿಯಲಿದೆ. ಹಾಗಿದ್ದಾಗ್ಯೂ ನೆರೆಯ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು, ಕೆಡಿಪಿ ಸಭೆಯ ನಿರ್ಣಯವನ್ನು ಲಕ್ಕಿಸದೆ ಸರ್ಕಾರಿ ಭೂಮಿ ಇರುವ ಕಡೆ ಕಾಮಗಾರಿಯನ್ನು ಹೇಮಾವತಿ ನಾಲಾ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ. ಇದರಿಂದ ಜಿಲ್ಲೆಗೆ ಜನರಿಗೆ ಬಹಳ ಅನ್ಯಾಯವಾಗಲಿದೆ ಎಂದರು.
ಎಕ್ಸ್ಪ್ರೆಸ್ ಕೆನಾಲ್ ಆರಂಭವಾದರೆ 72 ಕಿ.ಮಿ.ಗಿಂತ ಹಿಂದೆ ಇರುವ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ ತಾಲೂಕುಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಕಾಮಗಾರಿ ನಿಲ್ಲಿಸುವಂತೆ ಜಿಲ್ಲೆಯ ಇಬ್ಬರು ಮಂತ್ರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಲಾಗಿದೆ. ಕಾಮಗಾರಿ ನಿಲ್ಲಿಸದಿದ್ದರೆ ಮೇ16 ರಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿಯೇ ತರಾತುರಿಯಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಹಾಲಿ ಇರುವ ನಾಲೆಯ ಮಾರ್ಗವನ್ನು ಬದಲಾಯಿಸಲು ಹೊರಟಿದ್ದಾರೆ. ಖಾಸಗಿ ಜಮೀನುಗಳನ್ನು ಹೊರತುಪಡಿಸಿ, ಸರ್ಕಾರಿ ಭೂಮಿಯಲ್ಲಿ ಕಾಮಗಾರಿ ನಡೆಸುತಿದ್ದಾರೆ. ನ್ಯಾಯೋಚಿತವಾಗಿ ಕಾಮಗಾರಿಯನ್ನು ನಿಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಹಕಾರಿ ಸಚಿವರೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಿದ್ದೇವೆ. ಕಾಮಗಾರಿ ನಿಲ್ಲಿಸದಿದ್ದರೆ ಯಾವ ರೀತಿಯ ಹೋರಾಟಕ್ಕೂ ಸಿದ್ದ. ಜಿಲ್ಲೆಯ ಜನರಿಗೋಸ್ಕರ ಜೈಲಿಗೆ ಹೋಗಲು ತಯಾರಿದ್ದೇವೆ ಎಂದು ಹೇಳಿದರು.