ಪೆನ್ ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ವರ್ಚಸ್ಸು ಕುಂದಿಸಿ, ಹೆಣ್ಣುಮಕ್ಕಳ ಮಾನ ಹರಾಜು ಹಾಕುತ್ತಿರುವ ಪ್ರಕರಣದ ಹಿಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಇತ್ತೀಚೆಗೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಲೈಂಗಿಕ ಹಗರಣ ಮತ್ತು ಅದನ್ನು ಪೆನ್ ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಮೂಲಕ ರಾಜ್ಯಾದ್ಯಂತ ಹಂಚುತ್ತಾ ಸಂತ್ರಸ್ತ ಹೆಣ್ಣುಮಕ್ಕಳು ಹಾಗೂ ಅವರ ಕುಟುಂಬದವರ ಮಾನ ಕಳೆಯುತ್ತಿರುವ ಪ್ರಕರಣದ ಹಿಂದಿನ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿರುವ ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋ, ಪೆನ್ ಡ್ರೈವ್ ಹಂಚಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರ ಹಿಂದಿನ ರೂವಾರಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬುದು ಜಗಜನಿತವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ವಕೀಲ ದೇವರಾಜೇಗೌಡರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಇಂತಹ ನೀಚ ಕೆಲಸಕ್ಕೆ ಇಳಿದಿರುವುದು ಖಂಡನೀಯ ಎಂದರು.
ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಲೈಂಗಿಕ ಹಗರಣವನ್ನು ಜೆಡಿಎಸ್ ನಾಯಕರ ತೇಜೋವಧೆಗೆ ಬಳಿಸಿಕೊಂಡು, ಸಂತ್ರಸ್ತ ಹೆಣ್ಣುಮಕ್ಕಳ ಮರ್ಯಾದೆ ಕಳೆಯುವ ಕೃತ್ಯದ ಹಿಂದಿರುವ, ಹೀನ ಕೃತ್ಯವೆಸಗಿರುವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ಜೆಡಿಎಸ್ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುತ್ತದೆ ಎಂದರು.


