ತುಮಕೂರು ಜಿಲ್ಲೆಯ ಜನ -ಜಾನವಾರಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುವುದಕ್ಕೋಸ್ಕರವೆ ಈ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಕಾಮಗಾರಿ ನಿಲ್ಲಿಸಬೇಕು, ನಮ್ಮ ನೀರು ನಮ್ಮ ಹಕ್ಕು ಘೋಷಣೆಯೊಂದಿಗೆ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ತುಮಕೂರಿನಲ್ಲಿ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಮಾಗಡಿ ಕೆರೆಗಳಿಗೆ ನೀರು ಹರಿಸಲು ಶ್ರೀರಂಗ ಏತ ನೀರಾವರಿ ಯೋಜನೆಯಡಿ ಹೇಮಾವತಿ ನೀರನ್ನು ಲಿಂಕ್ ಕೆನಾಲ್ ಮೂಲಕ ತೆಗೆದುಕೊಂಡು ಹೋಗಲು ಉದ್ದೇಶಿಸಿದ್ದು ಕಾಮಗಾರಿ ನಡೆಸಲಾಗುತ್ತಿದೆ. ಈ ಕಾಮಗಾರಿ ಶೀಘ್ರವೆ ನಿಲ್ಲಿಸಬೇಕು ಎಂದು ಶಿವಣ್ಣ ಎಚ್ಚರಿಕೆ ನೀಡಿದರು.
ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ, ತುಮಕೂರು ಜಿಲ್ಲೆಗೆ 24 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಈ ಹಂಚಿಕೆಯಲ್ಲಿ ಮಾಗಡಿ ತಾಲೂಕಿಗೂ ನೀರು ತೆಗೆದುಕೊಂಡು ಹೋಗಲು ಸರ್ಕಾರ ಮುಂದಾಗಿದೆ. ಮಾಗಡಿ ತಾಲೂಕಿಗೆ ಹೇಮಾವತಿ ನೀರನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಿ ತೆಗೆದುಕೊಂಡು ಹೋಗಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಪೈಪ್ ಲೈನ್ ಮೂಲಕ ಮಾಗಡಿಗೆ ನೀರು ಬಿಡುವುದಿಲ್ಲ. ಕಾಮಗಾರಿಯನ್ನು ಸರ್ಕಾರ ನಿಲ್ಲಿಸಬೇಕು, ಇಲ್ಲವೆಂದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿ ನಿಲ್ಲಿಸಬೇಕು ಎಂದು ತಿರ್ಮಾನ ಮಾಡಲಾಗಿತ್ತು. ಅದರು ಕಾಮಗಾರಿ ಕೈಗೊಂಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದರು. ಈ ಲಿಂಕ್ ಕೆನಾಲ್ ಯೋಜನೆಯಿಂದ ತುಮಕೂರು ಜಿಲ್ಲೆಯ ಇಪ್ಪತ್ತೆರಡು ಹಳ್ಳಿಗಳಿಗೆ ನಷ್ಟ ಉಂಟಾಗುತ್ತದೆ ಎಂದು ಕೃಷ್ಣಪ್ಪ ಹೇಳಿದರು.
ಮಾಜಿ ಶಾಸಕ ಎಚ್ ನಿಂಗಪ್ಪ ಮಾತನಾಡಿ, ರಾಮನಗರಕ್ಕೆ ಬೇಕಾದರೆ ಶಿಂಷಾ ಸೇರಿ ಇತರೆ ನದಿಗಳಿಂದ ನೀರು ತೆಗೆದುಕೊಂಡು ಹೋಗಲಿ, ಜಿಲ್ಲೆಗೆ ಹಂಚಿಕೆಯಾಗಿರುವ ನದಿ ನೀರನ್ನು ಮಾಗಡಿಗೆ ಬಿಡುವುದಿಲ್ಲ. ಹೇಮಾವತಿಯಲ್ಲಿ ನೀರೆ ಇಲ್ಲದಿರುವಾಗ ಈ ಯೋಜನೆ ಕೈಗೆತ್ತಿಕೊಂಡಿರುವುದು ವಿಪರ್ಯಾಸ ಎಂದು ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ರೈತ ಮುಖಂಡರಾದ ಬಿ.ಎ. ಲಕ್ಷ್ಮೀನಾರಾಯಣ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಪುಟ್ಟಯ್ಯ ದಿಲೀಪ್ ಕುಮಾರ್, ವಕೀಲ ತಿಮ್ಮಪ್ಪ ಹಾಜರಿದ್ದರು.