ಇಂದು ಭಾರತದ ಸಂವಿಧಾನ ದಾಳಿಗೊಳಗಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ. ಒಂದು ಕಡೆ ಬಿಜೆಪಿಯ ನಾಯಕರಾದ ಅನಂತ ಕುಮಾರ್ ಹೆಗಡೆ, ಅರುಣ್ ಗೋಯಲ್, ಲಲ್ಲು ಸಿಂಗ್, ಜ್ಯೋತಿ ಮಿರ್ಬೆನ್ ಅವರು ಬಹಿರಂಗವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಹೇಳುತ್ತಿದ್ದಾರೆ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕೆ.ಪಿ.ನಂಜುಂಡಿ ಅವರನ್ನ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು ಇಂದು ಶ್ರಮಿಕ ವರ್ಗದ ಜನರು ಸಂಭ್ರಮಿಸುವ ದಿನ. ನಮ್ಮ ಹಿಂದುಳಿದ ವರ್ಗದ ನಾಯಕರಾದ ಕೆ.ಜಿ ನಂಜುಂಡಿ ಅವರು ಮನೆಗೆ ಮರಳಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಸ್ವಾಗತ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಪರವಾಗಿ ಸ್ವಾಗತ ಕೋರುತ್ತೇನೆ ಎಂದರು.
ಈಗಾಗಲೇ ಭಾರತ ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ಅಧಿಕಾರಿಗಳು ಸರ್ಕಾರದ ಕಾರ್ಯದರ್ಶಿಯಾಗುತ್ತಿಲ್ಲ. ಜಂಟಿ ಕಾರ್ಯದರ್ಶಿಯಿಂದ ಉನ್ನತ ಸ್ಥಾನಗಳನ್ನು ಈ ಸಮುದಾಯದವರಿಗೆ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಕರ್ಮ, ಈಡಿಗ ಸೇರಿದಂತೆ ನೂರಾರು ಹಿಂದುಳಿದ ವರ್ಗ ಎಲ್ಲಿ ಹೋಗಬೇಕು? ಇನ್ನು ಸಾರ್ವಜನಿಕ ಉದ್ದಿಮೆಗಳಲ್ಲಿ ಒಬಿಸಿ ಗಳಿಗೆ 27% ಮೀಸಲಾತಿ ನೀಡಲಾಗಿದ್ದು, ಈ ಉದ್ದಿಮೆಗಳನ್ನು ಖಾಸಗಿಕರಣ ಮಾಡುವ ಮೂಲಕ ಮೀಸಲಾತಿ ನಿರ್ಮೂಲನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ಸರ್ಕಾರದಲ್ಲಿ ಕೇವಲ ಓರ್ವ ಒಬಿಸಿ ಸಮುದಾಯದ ಅಧಿಕಾರಿ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿಂದುಳಿದ ಸಮಾಜದವರ ರಕ್ಷಣೆ ಮಾಡಲು ಹೇಗೆ ಸಾಧ್ಯ? ಹಿಂದುಳಿದ ವರ್ಗಗಗಳ ಆದಾಯ ಮಿತಿಯನ್ನು ಪರಿಶೀಲನೆ ಮಾಡಿ ಹೆಚ್ಚಳ ಮಾಡಿಲ್ಲ. ಭಾರತ ಸರ್ಕಾರದ ವ್ಯಾಪ್ತಿಯಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 8 ಲಕ್ಷಕ್ಕಿಂತ ಹೆಚ್ಚು ಹುದ್ದೆಗಳು ಹಿಂದುಳಿದ ವರ್ಗದವರಿಗೆ ಸೇರಬೇಕು ಎಂದರು.
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶೋಷಿತ, ಹಿಂದುಳಿದ ಸಮುದಾಯಗಳ ರಕ್ಷಣೆಗೆ ಮುಂದಾಗಬೇಕು. ನಂಜುಂಡಿ ಅವರು ಕೇವಲ ವಿಶ್ವಕರ್ಮ ಸಮಾಜ ಮಾತ್ರವಲ್ಲ ಹಿಂದುಳಿದ ವರ್ಗಗಳ ಧ್ವನಿಯಾಗಿದ್ದಾರೆ? ಪರಿಶ್ರಮದ ದೇವರು ವಿಶ್ವಕರ್ಮ ಆಗಿದ್ದಾರೆ. ಜಗತ್ತಿನಲ್ಲಿ ಪರಿಶ್ರಮ ಇಲ್ಲದೆ ಏನಾದರೂ ಸಾಧನೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಜೂನ್ 4ರ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ದೇಶದಲ್ಲಿ ಜಾತಿ ಗಣತಿ ಮಾಡಿ, ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಿ ಹಿಂದುಳಿದ ವರ್ಗಗಳ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರ ಜತೆಗೆ ಕಾಂಗ್ರೆಸ್ ಸರ್ಕಾರ ಮೀಸಲಾತಿ ಮಿತಿಯನ್ನು 50%ಗಿಂತ ಹೆಚ್ಚಳ ಮಾಡಲಾಗುವುದು. ಆಮೂಲಕ ಎಲ್ಲಾ ಸಮುದಾಯಗಳಿಗೂ ಅಗತ್ಯ ನೆರವು ನೀಡಲಾಗುವುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್ತಿನ ಸದಸ್ಯ ದಿನೇಶ್ ಗೂಳಿಗೌಡ, ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ಸೌಮ್ಯ ರೆಡ್ಡಿ ಹಾಜರಿದ್ದರು.