ಹಿರಿಯ ನಿರ್ಮಾಪಕ, ನಿರ್ದೇಶಕ ಕಂ ನಟ ದ್ವಾರಕೀಶ್ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ದ್ವಾರಕೀಶ್ ಬಂಧುಗಳು, ಲಕ್ಷಾಂತರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಅಗಸ್ಟ್ 19, 1942ರಲ್ಲಿ ಮೈಸೂರು ಜಿಲ್ಲೆ ಇಟ್ಟಿಗೆ ಗೂಡಿನಲ್ಲಿ ಜನಿಸಿದ ದ್ವಾರಕೀಶ್ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ಪೂರೈಸಿದರು. ಡಿಪ್ಲೋಮೋ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. ನಂತರ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.
1966ರಲ್ಲಿ ತುಂಗಾ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣವಾದ ಮಮತೆಯ ಬಂಧನ ಚಿತ್ರದಲ್ಲಿ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. 1969ರಲ್ಲಿ ಮೇಯರ್ ಮುತ್ತಣ್ಣ ಸಿನಿಮಾವನ್ನು ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ನಟಿಸಿದ್ದಾರೆ.
1985ರಲ್ಲಿ ನಿರ್ದೇಶಕರಾಗಿ ನೀ ಬರೆದ ಕಾದಂಬರಿ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರದ ಮೂಲಕ ಯಶಸ್ವಿ ನಿರ್ದೇಶಕರಾಗಿ ಹೆಸರು ಪಡೆದರು. ಡ್ಯಾನ್ಸ್ ರಾಜ ಡ್ಯಾನ್ಸ್, ರಾಯರು ಬಂದರು ಮಾವನ ಮನೆಗೆ ಚಿತ್ರಗಳನ್ನು ನಿರ್ದೇಶಿಸಿದರು. ಇದರಿಂದ ಹೆಸರು ಪಡೆದರು.
2004ರಲ್ಲಿ ವಿಷ್ಣುವರ್ಧನ್ ನಟನೆಯ ಆಪ್ತಮಿತ್ರ ಚಿತ್ರವನ್ನು ನಿರ್ಮಾಣ ಮಾಡಿದರು. ಈ ಚಿತ್ರ ಯಶಸ್ಸು ಕಂಡು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆಯನ್ನು ಮಾಡಿತು.
ಕುಳ್ಳ ಏಜೆಂಟ್ 000, ಕೌ ಬಾಯ್ ಕುಳ್ಳ, ಭಾಗ್ಯವಂತರು, ಕಿಟ್ಟುಪುಟ್ಟು, ಸಿಂಗಾಪುರದಲ್ಲಿ ರಾಜ ಕುಳ್ಳ, ಪ್ರೀತಿ ಮಾಡು ತಮಾಷೆ ನೋಡು, ಕುಳ್ಳ-ಕುಳ್ಳಿ, ಮಂಕುತಿಮ್ಮ, ಗುರುಶಿಷ್ಯರು, ಮನೆಮನೆ ಕತೆ, ಪೆದ್ದ ಗೆದ್ದ, ನ್ಯಾಯ ಎಲ್ಲಿದೆ?, ಅನ್ನದ ಬೈರವಿ, ಪೊಲೀಸ್ ಪಾಪಣ್ಣ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ನೀ ಬರೆದ ಕಾದಂಬರಿ, ನೀ ತಂದ ಕಾಣಿಕೆ, ಆಫ್ರಿಕಾದಲ್ಲಿ ಶೀಲಾ, ಜೈ ಕರ್ನಾಟಕ, ಶ್ರುತಿ, ಕಿಲಾಡಿಗಳು, ಕಿಡ್ನಾಪ್, ಗಿಡ್ಡು ದಾದ, ಹೃದಯ ಕಳ್ಳರು, ಮಜ್ನು, ಶ್ರುತಿ ಹಾಕಿದ ಹೆಜ್ಜೆ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.