ತುಮಕೂರು:ಕಲ್ಪತರು ನಾಡಿನ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಏಪ್ರಿಲ್ 5ರೊಳಗೆ ನ್ಯಾಫೇಡ್ ಖರೀದಿ ಕೇಂದ್ರ ತೆರೆಯದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ 12 ಸಾವಿರ ರೂ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ 1500 ಪ್ರೋತ್ಸಾಹಧನ ಸೇರಿ ಕ್ವಿಂಟಾಲ್‌ಗೆ 13,500 ರೂ ಬೆಲೆಯಲ್ಲಿ ಕೊಬ್ಬರಿಗೆ ರೈತರು ನೊಂದಣಿ ಮಾಡಿ, ಕೊಬ್ಬರಿ ಸುಲಿದು ಕಾಯುತ್ತಿದ್ದರೂ ಇದುವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ದಿನದಿಂದ ದಿನಕ್ಕೆ ಕೊಬ್ಬರಿಯ ತೂಕ ಕಡಿಮೆಯಾಗುವುದರ ಜೊತೆಗೆ, ಕೌಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಸರ್ಕಾರ ಕೂಡಲೇ ನ್ಯಾಪೇಡ್ ಖರೀದಿ ಕೇಂದ್ರ ತೆರೆಯದಿದ್ದರೆ ರೈತರು ಬೀದಿಗಿಳಿಯುವುದು ಅನಿವಾರ್ಯ ಎಂದರು.
ಕೊಬ್ಬರಿ ಬೆಲೆ ತೀವ್ರ ಕುಸಿತಕ್ಕೆ ಕೇಂದ್ರ ಸರಕಾರ ನೆರೆಯ ದೇಶಗಳಿಂದ ಸುಂಕ ರಹಿತವಾಗಿ ಎಣ್ಣೆಕಾಳು ಮತ್ತು ಖಾದ್ಯ ತೈಲಗಳನ್ನು ಅಮದು ಮಾಡಿಕೊಳ್ಳುತ್ತಿರುವುದೇ ಪ್ರಮುಖ ಕಾರಣವಾಗಿದೆ. ಕೂಡಲೇ ಅಮದು ನಿಲ್ಲಿಸಬೇಕು. ಹಾಗೆಯೇ ಕರ್ನಾಟಕ ರಾಜ್ಯ ಕೃಷಿ ಬೆಲೆ ನಿಗಧಿ ಆಯೋಗದ ವರದಿಯಂತೆ 16,730ರೂ ಕ್ವಿಂಟಾಲ್‌ಗೆ ಮತ್ತು ಶೇ೫೦ರ ಲಾಭ ಸೇರಿ ಕ್ವಿಂಟಾಲ್‌ಗೆ 25 ಸಾವಿರ ರೂ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಗೋವಿಂದರಾಜು ತಿಳಿಸಿದರು.
ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಂತಹ ಹೊತ್ತಿನಲ್ಲಿ ಬೋರೆವೆಲ್ ಡಿಗ್ಗಿಂಗ್ ಮಾಡುವ ಬೋರೆವೆಲ್ ಲಾರಿ ಮಾಲೀಕರು ಏಕಾಎಕಿ ಅಡಿ ಕೊಳವೆ ಬಾವಿಗೆ 15-20 ರೂ ಹೆಚ್ಚಳ ಮಾಡಿರುವುದು ರೈತರನ್ನು ಸಾಕಷ್ಟು ಸಂಕಷ್ಟಕ್ಕೆ ದೂಡಿದೆ ಎಂದರು. ಜಿಲ್ಲೆಯಲ್ಲಿ ತೀವ್ರ ಬರವಿದ್ದು, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ.
ಇದುವರೆಗೂ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.ಬೆಳೆ ಪರಿಹಾರ ನೀಡಿಲ್ಲ.ಗೋಶಾಲೆ ತೆರೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ ಎಂದು ಹೇಳಿದರೂ ಪಿಡಿಓ ಮತ್ತು ತಹಶೀಲ್ದಾರ್‌ಗಳು ಸಮರ್ಪಕವಾಗಿ ಹಣ ಬಿಡುಗಡೆ ಮಾಡದೆ ತೊಂದರೆ ಅನುಭವಿಸುವಂತೆ ಮಾಡಿದ್ದಾರೆ. ಜಿಲ್ಲಾಡಳಿತ ಶ್ರೀಘ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ದೊಡ್ಡಮಾಳಯ್ಯ, ವಿವಿಧ ತಾಲೂಕು ಅಧ್ಯಕ್ಷರಾದ ಲಕ್ಷö್ಮಣಗೌಡ, ವೆಂಕಟೇಗೌಡ, ನರಸಿಂಹಮೂರ್ತಿ, ರಂಗಹನುಮಯ್ಯ, ಯುವಘಟಕದ ಜಿಲ್ಲಾಧ್ಯಕ್ಷ ಚಿರತೆ ಚಿಕ್ಕಣ್ಣ, ಅರೆಹಳ್ಳಿ ಮಂಜುನಾಥ್, ಜಗದೀಶ್, ಶಿವಕುಮಾರ್, ತಿಪ್ಪೇಗೌಡ, ಮಹಮದ್ ಶಬ್ಬೀರ್, ಚಿಕ್ಕಬೋರೇಗೌಡ, ಸಿ.ಜಿ.ಲೋಕೇಶ್ ಮಹಿಳಾ ಮುಖಂಡರಾದ ಭಾಗ್ಯಮ್ಮ, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ ಇದ್ದರು.