ನಾನು ತುಮಕೂರು ಜಿಲ್ಲೆಯ ವಾತಾವರಣ ಅಸ್ತಿರಗೊಳಿಸಲು ಬಂದಿಲ್ಲ, ಅಸ್ತಿರಗೊಂಡಿರುವುದನ್ನು ಸುಸ್ಥಿರಗೊಳಿಸಿ ಸೌಹಾರ್ದ ವಾತಾವರಣ ನಿರ್ಮಾಣ ಮಾಡುವ ಆಶಯದೊಂದಿಗೆ ಬಂದಿದ್ದೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿದರು.
ತುಮಕೂರಿನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸೋಮಣ್ಣ, ಈ ದೇಶವನ್ನು ಯಾರು ಸಮರ್ಥವಾಗಿ ಮುನ್ನಡೆಸಬೇಕು, ಮುಂದಿನ ತಲೆಮಾರಿಗೂ ದೇಶವನ್ನು ಸುಭದ್ರವಾಗಿ ಕಾಪಾಡುವ ದೊಡ್ಡ ಸಂದೇಶ ನೀಡುವಂತಹ ಈ ಚುನಾವಣೆ ಬಗ್ಗೆ ಹೊರದೇಶದವರೂ ಕುತೂಹಲದಿಂದ ಗಮನಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರು ನನ್ನನ್ನು ಹೊರಗಿನ ಅಭ್ಯರ್ಥಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಕ್ಷುಲ್ಲಕ ರಾಜಕಾರಣ ಮಾಡಿಕೊಂಡೇ ಬಂದ ಕಾಂಗ್ರೆಸ್, ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ, ಬಳ್ಳಾರಿಯಲ್ಲಿ ಸೋನಿಯಾಗಾಂಧಿ, ವಯನಾಡಿನಲ್ಲಿ ರಾಹುಲ್‌ಗಾಂಧಿ ಸ್ಪರ್ಧೆ ಮಾಡಲು ಯಾರು ಕರೆ ತಂದರು? ಇದು ಗೊತ್ತಿಲ್ಲವೇ ಕಾಂಗ್ರೆಸ್ ಮುಖಂಡರಿಗೆ ಎಂದು ಪ್ರಶ್ನಿಸಿದರು.
ನಾನು ಪಕ್ಕದ ಜಿಲ್ಲೆಯವನು. ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡರು ಬೆಂಗಳೂರು ಗ್ರಾಮಾಂತರ ಕ್ಷೇತ್ರದವರು, ಅವರು ಬೆಂಗಳೂರು ನಿವಾಸಿಯಲ್ಲವೆ? ಗೃಹ ಸಚಿವ ಡಾ.ಪರಮೇಶ್ವರ್ ಕೊರಟಗೆರೆ ಕ್ಷೇತ್ರದ ನಿವಾಸಿಯೆ? ಸಚಿವ ಕೆ.ಎನ್.ರಾಜಣ್ಣ ಮಧುಗಿರಿಯಲ್ಲಿ ವಾಸ ಮಾಡುತ್ತಿದ್ದಾರೆಯೆ? ಎಂದು ತಿರುಗೇಟು ನೀಡಿದರು.
ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿರುವ ನನಗೆ ಜಿಲ್ಲೆಯ ಸಮಗ್ರ ಪರಿಚಯವಿದೆ, ಇಲ್ಲಿನ ಸಮಸ್ಯೆಗಳು, ಅಗತ್ಯತೆಗಳ ಬಗ್ಗೆಯೂ ಗೊತ್ತಿದೆ ಎಂದರು. ಯಾವುದೇ ಯೋಜನೆಗಳು ಕಾಗದದ ಮೇಲೆ ಉಳಿಯಬಾರದು, ಅವು ಸಕಾಲದಲ್ಲಿ ಕಾರ್ಯಗತಗೊಳ್ಳಬೇಕು ಎಂಬುದು ನನ್ನ ಆಶಯ. ಅನೇಕ ಯೋಜನೆಗಳು ಹಲವಾರು ವರ್ಷಗಳಿಂದ ಪೂರ್ಣಗೊಳ್ಳದೆ ಉಳಿದಿವೆ. ತುಮಕೂರು-ರಾಯರ್ದು, ತುಮಕೂರು-ದಾವಣಗೆರೆ ರೈಲು ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ, ಇಂತಹ ಯೋಜನೆಗಳಿಗೆ ವೇಗ ನೀಡಿ ಮುಗಿಸುವುದು ನನ್ನ ಆದ್ಯತೆಯಾಗಿದೆ ಎಂದರು.