ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಎಸ್‌ಯುಸಿಐ ಕಮ್ಯುನಿಷ್ಟ್ ಪಕ್ಷದ ಅಭ್ಯರ್ಥಿಯಾಗಿ ಎಸ್.ಎನ್. ಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಜನರ ನ್ಯಾಯಯುತ ಬದುಕಿಗಾಗಿ ಸತತ ಹೋರಾಟ ನಡೆಸುತ್ತಿರುವ ಎಸ್.ಎನ್.ಸ್ವಾಮಿ ಅವರನ್ನು ಪ್ರಜ್ಞಾವಂತ ಮತದಾರರು ಆಯ್ಕೆ ಮಾಡಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ರಾಜ್ಯ ನಾಯಕ ಎಂ.ಶಶಿಧರ್ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. 2014ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ ಎಂದು ಆರೋಪಿಸಿದರು.
ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ. ಆದರೆ ಶ್ರೀಮಾನ್ ಮೋದಿ ಅವರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಇಷ್ಟು ವರ್ಷ ಆಳ್ವಿಕೆ ನಡೆಸಿ ದೇಶವನ್ನು ಹಾಳುಗೆಡವಿದ ಕಾರಣ ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಇನ್ನೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಚುನಾವಣೆ ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ, ಶೋಷಕರು ಮತ್ತು ಶೋಷಿತರ ನಡುವಿನ ಸಮರವಾಗಿದೆ. ಭಾರತದ ಶೋಷಿತ ದುಡಿಯುವ ವರ್ಗದ, ಬಡ ರೈತರ ಪರ್ಯಾಯವಾಗಿ ದೇಶದ ಎಡಪಕ್ಷಗಳು ಒಂದು ಒಕ್ಕೂಟದ ಮೂಲಕ ಜನ ಹೋರಾಟಗಳನ್ನು ಕಟ್ಟ ಬೇಕಾಗಿತ್ತು. ಚುನಾವಣೆಗಳು ಪರಿಹಾರವಲ್ಲ, ಸಮಾಜವಾದವೇ ನೈಜ ಪರಿಹಾರ ಎಂಬ ಪ್ರಚಾರವನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ ದುರಂತವೆAದರೆ ಸಿಪಿಐ, ಸಿಪಿಐ (ಎಂ) ನಂತಹ ಎಡವಾದಿ ಪಕ್ಷಗಳು ಕೆಲವು ಎಂಪಿ ಸೀಟುಗಳ ಆಸೆಗೆ ಇಂಡಿಯಾ ಮೈತ್ರಿಕೂಟವನ್ನು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷವು ಶೋಷಿತ ಜನರ ನೈಜ ಹೋರಾಟದ ಪರ್ಯಾಯವಾಗಿ ತನ್ನ ಶಕ್ತಿಮೀರಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ. ಎಂದರು.
ಎಸ್‌ಯುಸಿಐ ನಾಯಕ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎನ್. ಸ್ವಾಮಿ ಮಾತನಾಡಿ, ಮೋದಿ ಸರ್ಕಾರ ಬೆಲೆ ಏರಿಕೆ ನಿರುದ್ಯೋಗ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಪಾರು ಮಾಡದೆ ಕಾರ್ಪೊರೇಟ್ ವಲಯಕ್ಕೆ ಆದ್ಯತೆ ನೀಡುತ್ತಾ ಅದಾನಿ ಅಂಬಾನಿಗಳನ್ನು ಬೆಳಸುತ್ತಿದ್ದಾರೆಯೇ ಹೊರತು ಬಡವರ, ರೈತರ, ಕೃಷಿಕರ ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಯುಸಿಐನ ಅಶ್ವಿನಿ, ಕಲ್ಯಾಣಿ, ರತ್ನಮ್ಮ, ಮಂಜುಳಾ, ಲಕ್ಕಪ್ಪ ಇದ್ದರು.