ತುಮಕೂರು ತಾಲ್ಲೂಕಿನ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಚ್ಚಂಗಿ ಕೆರೆಯ ಮಧ್ಯೆಭಾಗದಲ್ಲಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿರುವ ಮೂರು ಮೃತದೇಹಗಳು ಪತ್ತೆಯಾಗಿವೆ.
ಕುಚ್ಚಂಗಿ ಗ್ರಾಮದ ಕೆರೆ ನೀರಿಲ್ಲದೆ ಬರಿದಾಗಿದ್ದು, ಜಾಲಿಗಿಡಗಳು ಸೇರಿದಂತೆ ಇನ್ನಿತರೆ ಗಿಡಗಳ ಪೊದೆ ಆವರಿಸಿದೆ. ಕೆರೆಯ ಮಧ್ಯೆ ಭಾಗದಲ್ಲಿ ಅರೆಬರೆ ಸುಟ್ಟಿರುವ ಕಾರು ಪತ್ತೆಯಾಗಿದೆ.
ಈ ಕಾರಿನ ಡಿಕ್ಕಿಯಲ್ಲಿ ಎರಡು ಮೃತದೇಹ ಹಾಗೂ ಹಿಂಬದಿಯ ಸೀಟಿನಲ್ಲಿ ಒಂದು ಮೃತದೇಹ ಸೇರಿದಂತೆ ಮೂರು ಮೃತದೇಹಗಳು ದೊರೆತಿದ್ದು, ಈ ಮೂರು ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿರುವುದರಿಂದ ಗುರುತು ಪತ್ತೆಯಾಗಿಲ್ಲ.
ಮಾರುತಿ ಎಸ್. ಪ್ರಸ್ ಕಾರಿನಲ್ಲಿ ರಾತ್ರಿ ಬಂದಿರುವ ದುಷ್ಕರ್ಮಿಗಳು ಕಾರನ್ನು ಕೆರೆಯ ಮಧ್ಯಭಾಗಕ್ಕೆ ಕೊಂಡೊಯ್ದು ಪೊದೆಗಳ ಮಧ್ಯೆದಲ್ಲಿ ನಿಲ್ಲಿಸಿ ಕಾರಿಗೂ ಸಹ ಬೆಂಕಿ ಹಚ್ಚಿ ಸುಟ್ಟು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಮಧ್ಯಾಹ್ನ ಗ್ರಾಮಸ್ಥರು ಕೆರೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರು ನಿಂತಿರುವುದನ್ನು ಕಂಡು ಕೋರಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಕೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವಗಳು ಇರುವುದು ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಖಾದರ್, ಡಿವೈಎಸ್ಪಿ ಚಂದ್ರಶೇಖರ್, ಗ್ರಾಮಾಂತರ ಸಿಪಿಐ ಅಂಬರೀಶಗೌಡ, ಕೋರಾ ಪಿಎಸ್‌ಐ ಸಾಗರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳವನ್ನು ಪರಿಶೀಲಿಸಿದ ನಂತರ ಮಾತನಾಡಿದ ಎಸ್ಪಿ ಅಶೋಕ್ ಮೃತದೇಹಗಳು ಸುಟ್ಟು ಹೋಗಿರುವುದರಿಂದ ಗುರುತು ಪತ್ತೆಯಾಗಿಲ್ಲ. ಎಫ್‌ಎಸ್‌ಎಲ್ ತಂಡ ಸಹ ಭೇಟಿ ನೀಡಿ ತಪಾಸಣೆ ನಡೆಸಿದೆ. ಕಾರಿನ ನಂಬರ್ ಆಧಾರದ ಮೇಲೆ ತನಿಖಾ ಕಾರ್ಯ ಚುರುಕುಗೊಂಡಿದೆ ಎಂದು ಹೇಳಿದರು.