ದುಡಿಯುವ ಮಹಿಳೆಯರ ಘನತೆಯ ಅಸ್ಮಿತೆಗಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಕರೆ ನೀಡಿದ್ದಾರೆ.
ವಿಶ್ವ ಮಹಿಳಾ ದಿನದ ಅಂಗವಾಗಿ ಸ್ಲಂಜನಾಂದೋಲನ ಕರ್ನಾಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಂಟಿಯಾಗಿ ತುಮಕೂರಿನ ರವೀಂದ್ರ ಕಲಾ ನಿಕೇತನದಲ್ಲಿ ಹಮ್ಮಿಕೊಂಡಿದ್ದ ದುಡಿಯುವ ಮಹಿಳೆಯರ ಸವಾಲುಗಳು ಮತ್ತು ಸಂವಿಧಾನ ಕುರಿತು ವಿಭಾಗ ಮಟ್ಟದ ಕಾರ್ಯಗಾರವನ್ನು ಉದ್ಘಾಟಸಿ ಅವರು ಮಾತನಾಡಿದರು.
ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟುವ ಕಾನೂನನ್ನು ಸಂವಿಧಾನದ ಆಶಯದಂತೆ ರೂಪಿಸಲಾಗಿದೆ. ಈ ಕಾನೂನು ಖಾಸಗಿ ಮತ್ತು ಸರ್ಕಾರಿ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿಯನ್ನು ರಚಿಸಲಾಗಿದೆ ಎಂದರು.
ಪುರಾಣಗಳಲ್ಲಿ ಸ್ತ್ರೀಯರನ್ನು ದೇವತೆಗಳ ಸ್ಥಾನದಲ್ಲಿಟ್ಟು ಗೌರವಿಸಲಾಗಿದೆ. ಆದರೆ ವ್ಯವಸ್ಥೆ ಮಹಿಳಾ ಘನತೆಯನ್ನು ನೀಡುವಲ್ಲಿ ವಿಫಲವಾಗಿದೆ. ಇದಕ್ಕೆ ಪುರುಷರಸ್ಟೇ ಕಾರಣರಲ್ಲ. ನಮ್ಮ ಇಡೀ ವ್ಯವಸ್ಥೆ ಕಾರಣವಾಗಿದೆ. ಹಾಗಾಗಿ ಸಾಮಾನ್ಯ ಮಹಿಳೆಯರ ಸ್ಥಿತಿಗತಿ ಹೀನಾಯವಾಗಿದ್ದು. ಉದ್ಯೋಗಸ್ಥ ಮಹಿಳೆಯರು ಕುಟುಂಬ ನಿರ್ವಹಣೆ ಮಾಡಿದರೆ ದುಡಿಯುವ ಮಹಿಳೆಯರು ಸಮಾಜ ಮತ್ತು ದೇಶವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆಯರ ಮಾನಸಿಕ ಆರೋಗ್ಯದ ಕಡೆಯು ಹೆಚ್ಚು ಸಮಯ ನೀಡಬೇಕು. ಮಹಿಳೆಯರಿಗೆ ಪ್ರಾಕೃತಿಕವಾದ ಶಕ್ತಿಯಿದ್ದು ಈ ಮೂಲಕ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ. 18 ವರ್ಷದವೆಗೂ ಮಕ್ಕಳಿಗೆ ಮೊಬೈಲ್ ನೀಡದೆ ನಾವು ಇದಕ್ಕೆ ಬದ್ದರಾದರೆ ಭವಿಷ್ಯದಲ್ಲಿ ಸಂವಿಧಾನಖಾತ್ರಿ ಮಾಡಿರುವ ಮೂಲಭೂತ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ದುಡಿಯುವ ಮಹಿಳೆಯರ ಶಿಕ್ಷಣ, ಆರೋಗ್ಯ, ಆಹಾರ, ಭೂಮಿ, ಮತ್ತು ವಸತಿ ಹಾಗೂ ಉದ್ಯೋಗದಂತಹ ಮೂಲಭೂತ ಪ್ರಶ್ನೆಗಳು ಮಹಿಳೆಯರ ಸಹಭಾಗಿತ್ವವನ್ನು ಹೆಚ್ಚಿಸಿ ನಾಯಕತ್ವವನ್ನು ಪ್ರೇರೇಪಿಸಬೇಕಿದೆ ಎಂದು ಹೇಳಿದರು.
ದೇಶಾದ್ಯಂತ ಶೇ.70ಕ್ಕೂ ಹೆಚ್ಚು ಮಹಿಳೆಯರು ವೇತನವಿಲ್ಲದೆ ದುಡಿಯುತ್ತಿದ್ದಾರೆ. ಮನೆಗೆಲಸ, ಅಡುಗೆ, ಮನೆ ಸ್ವಚ್ಚತೆ, ಬಟ್ಟೆ ತೊಳೆಯುವುದು, ಕುಟುಂಬ ನಿರ್ವಹಣೆಗಾಗಿ ಬೀದಿ ವ್ಯಾಪಾರ, ಹಮಾಲಿ, ಇನ್ನಿತರೆ ಕೆಲಸಗಳಿಗಾಗಿ ದಿನದಲ್ಲಿ೮ ಗಂಟೆಗಳನ್ನು ನೀಡುತ್ತಿದ್ದು ಕನಿಷ್ಠ ವೇತನ ನೀಡಿದರು ವಾರ್ಷಿಕವಾಗಿ 33ಕೋಟಿಯಷ್ಟು ಮಾನವ ಶ್ರಮವನ್ನು ವ್ಯಯಿಸುತ್ತಿದ್ದಾರೆ. ತಮ್ಮ ಶ್ರಮಕ್ಕೆ ಕೂಲಿ ನಿರೀಕ್ಷೆಗೆ ನಗರ ಪ್ರದೇಶಗಳಲ್ಲಿ 75ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು ಈ ಮಹಿಳೆಯರನ್ನು ಸಂಘಟಿಸಿ ನಾಯಕತ್ವ ನೀಡಬೇಕಾಗಿದೆ ಎಂದರು.