ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣವನ್ನು ಆದಷ್ಟು ಬೇಗ ಬೇಧಿಸಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಕರಣವನ್ನು ಬೇಧಿಸಲು ಏಳೆಂಟು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಸಿಸಿಬಿ ಜೊತೆಗೆ ಎನ್ಐಎ ತಂಡವೂ ಆರೋಪಿಯ ಶೋಧ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಆರೋಪಿಯು ಯಾವ ಕಡೆಗೆ ಹೋಗಿದ್ದಾನೆಂಬುದನ್ನು ಶೋಧ ಮಾಡಲಾಗುತ್ತಿದ್ದು, ಆತ ಬಸ್ ನಲ್ಲಿ ಪ್ರಯಾಣ ಮಾಡಿದ್ದಾನೆ ಎಂಬ ಬಗ್ಗೆ ಮಾಹಿತಿ ಇದೆ. ಹಾಗಾಗಿ ಯಾವ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಎಂಬುದನ್ನು ಕಂಡು ಹಿಡಿಯಬೇಕಾಗಿದೆ. ಈ ಸಂಬಂಧ ಪೊಲೀಸರು ತುಮಕೂರಿನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಿಂದ ಹೊರಟ ಆರೋಪಿ ತುಮಕೂರಿನ ಮೂಲಕ ಮುಂದೆ ಹೋಗಿದ್ದಾನೆ ಎಂಬ ಬಗ್ಗೆ ಮಾಹಿತಿ ಇದೆ. ಹಾಗಾಗಿ ಎನ್ಐಎ ತಂಡ ಸಿಸಿಟಿವಿ ಪೂಟೇಜ್ ಪರಿಶೀಲನೆ ನಡೆಸಿದ್ದು, ತನಿಖಾ ಕಾರ್ಯವನ್ನು ಮುಂದುವರೆಸಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯು ತುಮಕೂರಿನಿಂದ ಮುಂದಕ್ಕೆ ಹೋಗಿದ್ದಾನೆ ಎಂಬ ಮಾಹಿತಿ ಇದೆ. ಸಿಸಿಟಿವಿ ಪೂಟೇಜ್ ಸೇರಿ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಯಾವ ಸಮಯದಲ್ಲಿ ಹೋಗಿದ್ದಾನೆ. ಏನು ಎನ್ನುವುದನ್ನು ನೋಡುತ್ತಿದ್ದಾರೆ ಎಂದು ಹೇಳಿದರು.
ಕೆಲವು ಚಿತ್ರಗಳು ಬೆಂಗಳೂರಿನಲ್ಲಿ ಸಿಕ್ಕಿದೆ. ಅದನ್ನು ಪರಿಶೀಲನೆ ಮಾಡಿ ಟ್ರ್ಯಾಕ್ ಮಾಡುತ್ತಿದ್ದಾರೆ. ಆದಷ್ಟು ಶೀಘ್ರವೇ ಈ ಪ್ರಕರಣವನ್ನು ಬೇಧಿಸುವ ವಿಶ್ವಾಸ ಇದೆ. ಆ ವ್ಯಕ್ತಿ ಸಿಗುವವರೆಗೂ ಆತನಿಗೆ ಸಂಘಟನೆಯ ನಂಟಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದರು.