Sunday, December 22, 2024
Google search engine
Homeಮುಖಪುಟಮಹಿಳೆಯರ ಹೋರಾಟದಲ್ಲಿ ನಾವು ಜೊತೆಯಲ್ಲಿ ನಿಲ್ಲಬೇಕು - ಸಿಎಂ ಸಿದ್ದರಾಮಯ್ಯ

ಮಹಿಳೆಯರ ಹೋರಾಟದಲ್ಲಿ ನಾವು ಜೊತೆಯಲ್ಲಿ ನಿಲ್ಲಬೇಕು – ಸಿಎಂ ಸಿದ್ದರಾಮಯ್ಯ

ಅಂತಾರಾಷ್ಟ್ರೀಯ ಮಹಿಳಾ ದಿನವು ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವಿಸುವುದಕ್ಕಷ್ಟೇ ಸೀಮಿತವಾಗದೆ ಅವರು ಎದುರಿಸುತ್ತಿರುವ ಸವಾಲುಗಳ ಮೇಲೆಯೂ ಬೆಳಕು ಚೆಲ್ಲಬೇಕು. ಲಿಂಗಾಧಾರಿತ ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಮಹಿಳೆಯರ ಹೋರಾಟದಲ್ಲಿ ನಾವೆಲ್ಲರೂ ಜೊತೆಯಲ್ಲಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಶ್ವ ಮಹಿಳೆಯರ ದಿನಾಚರಣೆಯ ಪ್ರಯುಕ್ತ ನಾಡಿನ ನನ್ನ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳನ್ನು ಕೋರಿರುವ ಅವರು, ಅವಕಾಶಗಳಿಂದ ವಂಚಿತವಾಗಿರುವ ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ದೊರಕುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ಇದು ಬುದ್ಧ, ಬಸವಣ್ಣ, ಅಂಬೇಡ್ಕರರು ಸಾರಿದ ಸಮಸಮಾಜದ ಆಶಯ ಕೂಡ. ಈ ದಿಸೆಯಲ್ಲಿ ಪ್ರಯತ್ನಗಳು ಸಾಗಲಿ ಎಂದಿದ್ದಾರೆ.

ನಮ್ಮ ಹಿಂದಿನ ಮತ್ತು ಇಂದಿನ ಸರ್ಕಾರದ ಅರ್ಧದಷ್ಟು ಯೋಜನೆಗಳು ಮಹಿಳಾಕೇಂದ್ರಿತವಾಗಿರುವುದನ್ನು ನಾಡು ಗಮನಿಸಿದೆ. ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿ, ಈ ದಿನದ ಆಚರಣೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿದೆ ಎಂದು ತಿಳಿಸಿದ್ದಾರೆ.

ಸ್ವಾವಲಂಬಿ ಬದುಕಿನ ಕನಸು ಕಟ್ಟಿಕೊಂಡಿರುವ ನಾಡಿನ ಕೋಟ್ಯಂತರ ಸ್ವಾಭಿಮಾನಿ ಮಹಿಳೆಯರ ಜೊತೆ ನಾವಿದ್ದೇವೆ. ನಮ್ಮ ಶಕ್ತಿ, ಗೃಹಲಕ್ಷ್ಮಿ, ಕೂಸಿನಮನೆ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಮಹಿಳೆಯರಲ್ಲಿ ಆರ್ಥಿಕ, ಸಾಮಾಜಿಕ ಬಲತುಂಬಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನವಯುಗಕ್ಕೆ ನಾಂದಿ ಹಾಡಿವೆ ಎಂದರು.

ಕುಟುಂಬವೊಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಬೇಕಾದರೆ ಅಲ್ಲಿ ಪುರುಷರಷ್ಟೇ ಮಹಿಳೆಯರ ಪಾತ್ರವೂ ಮುಖ್ಯ. ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಕೋಟ್ಯಂತರ ತಾಯಂದಿರ ಕೈಗಳಿಗೆ ಗೃಹಲಕ್ಷ್ಮಿಯ ಬಲ ನೀಡಿದ್ದೇವೆ, ಶಿಕ್ಷಣ ಮತ್ತು ಉದ್ಯೋಗ ನಿಮಿತ್ತ ನಿತ್ಯ ಪ್ರಯಾಣಿಸುವ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ” ತುಂಬಿದ್ದೇವೆ, ಸ್ವಂತ ಉದ್ಯೋಗ ಆರಂಭಿಸುವ ಅಕ್ಕ ತಂಗಿಯರ ಪ್ರಯತ್ನಕ್ಕೆ ಆರ್ಥಿಕ ನೆರವು ನೀಡಿದ್ದೇವೆ, ಅಂಗನವಾಡಿ ಕಾರ್ಯಕರ್ತೆಯರ ಪ್ರೋತ್ಸಾಹಧನ ಹೆಚ್ಚಿಸಿ ಅವರ ಜೀವನಮಟ್ಟ ಸುಧಾರಿಸಿದ್ದೇವೆ, ದೇವದಾಸಿ ವೃತ್ತಿ ತೊರೆದವರು, ಲಿಂಗತ್ವ ಅಲ್ಪಸಂಖ್ಯಾತರ ಘನತೆಯ ಬದುಕಿಗೆ ಬೆಂಬಲವಾಗಿ ನಿಂತಿದ್ದೇವೆ ಎಂದು ತಿಳಿಸಿದ್ದಾರೆ.

ಎಳೆಯ ಕಂದಮ್ಮನಿಂದ ಹಿಡಿದು ವಯೋವೃದ್ಧೆಯ ವರೆಗೆ ಪ್ರತಿಯೊಬ್ಬ ಹೆಣ್ಣು ನಮ್ಮ ಸರ್ಕಾರದ ಒಂದಿಲ್ಲೊಂದು ಯೋಜನೆಯ ಫಲಾನುಭವಿಯಾಗಿದ್ದಾರೆಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ನಮ್ಮ ಸರ್ಕಾರ ನಾಡಿನ ಹೆಣ್ಣುಮಕ್ಕಳಿಗೆ ಅನುದಿನವೂ ಮಹಿಳಾ ದಿನವನ್ನಾಗಿಸಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular