ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಬದಲಾವಣೆ ಮಾಡಲು ಚಿಂತನೆ ನಡೆಸಿದರೆ ಅದು ದಲಿತ ಸಿಎಂ ಆಯ್ಕೆ ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಬೇಕು ಎನ್ನುವುದು ಬಹುಪಾಲು ಶಾಸಕರ ಅಭಿಪ್ರಾಯವಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಲು ಬಯಸಿದರೆ ದಲಿತ ಸಿಎಂ ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಮುಖ್ಯಮಂತ್ರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅರ್ಹತೆಯುಳ್ಳವರಾಗಿದ್ದಾರೆ. ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಪರಮೇಶ್ವರ್ ಅವರಿಗೆ ಇದೆ. ಅವರು ಸಿಎಂ ಆಗಬೇಕು ಎಂಬುದು ನನ್ನ ಆಭಿಲಾಷೆ ಎಂದು ಸಚಿವ ಮಹದೇವಪ್ಪ ಅವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ.
ಹಾಗೆಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಮುಖ್ಯಮಂತ್ರಿ ಆಗಬಾರದು ಎಂದೇನೂ ಇಲ್ಲ. ಅವರೂ ಕೂಡ ಆಗಲಿ ಎಂದು ಹೇಳಿದ ಕೆ.ಎನ್.ರಾಜಣ್ಣ, ಈ ವಿಷಯವಾಗಿ ಮಹಾದೇವಪ್ಪ ಅವರಿಗಿಂತ ಮೊದಲೇ ನಾನು ಪ್ರಸ್ತಾಪ ಮಾಡಿದ್ದೇನೆ. ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನಾವು ಇಂತಹ ವಿಚಾರವನ್ನು ಎತ್ತು ಸೂಕ್ತವಲ್ಲ. ಹಾಗಾಗಿ ನಮಗೆ ನಾವೇ ನಿರ್ಬಂಧ ಹಾಕಿಕೊಂಡಿದ್ದೇವೆ ಎಂದು ಹೇಳಿದರು.
ಹಾಗೆಂದು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು ಎಂದು ನಾವು ಹೇಳುವುದಿಲ್ಲ. ಆದರೆ ದಲಿತ ಸಿಎಂ ನಮ್ಮ ಹಕ್ಕು, ನಮ್ಮ ಹಕ್ಕನ್ನು ಕೇಳವುದರಲ್ಲಿ ಯಾರ ಆಕ್ಷೇಪ ಇರಬಾರದು ಎಂದರು.
ಈಗಿನಿಂದಲೇ ದಲಿತ ಸಿಎಂ ಕೂಗು ಹೊರಹಾಕಿದರೆ ಯಾವತ್ತೋ ಒಂದು ದಿನ ಯಶಸ್ವಿ ಆಗುತ್ತದೆ. ಬೆಳಗ್ಗೆ ಕೇಳಿದರೆ ಸಂಜೆಗೆ ದಲಿತ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟು ಬಿಡುತ್ತಾರೆಯೇ ಎಂದು ಪ್ರಶ್ನಿಸಿದ ಕೆ.ಎನ್.ಆರ್. ಅದಕ್ಕೆ ಈಗಿನಿಂದಲೇ ಬೇಡಿಕೆಯನ್ನು ಇಡುತ್ತಿದ್ದೇವೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರ ಇಡಿ ದಾಖಲಿಸಿದ್ದ ಪ್ರಕರಣ ವಜಾ ಆದ ತಕ್ಷಣ ನಾವು ದಲಿತ ಮುಖ್ಯಮಂತ್ರಿ ಕೇಳುತ್ತಿದ್ದೇವೆ ಎನ್ನುವುದು ತಪ್ಪು. ಈ ಹಿಂದೆ ಹಲವು ಬಾರಿ ದಲಿತ ಸಿಎಂ ಬೇಕು ಎಂದು ಕೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು.
ದಲಿತ ಸಿಎಂ ಬೇಡಿಕೆ ಅಪ್ರಸ್ತುತ: ಪರಮೇಶ್ವರ್
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ದಲಿತ ಮುಖ್ಯಮಂತ್ರಿ ಕುರಿತು ನಾನೇನು ಮಾತನಾಡುವುದಿಲ್ಲ. ಅದರ ಬಗ್ಗೆ ಉತ್ತರ ಕೊಡುವುದಿಲ್ಲ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಇದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈಗಿನ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ಕುರಿತು ಮಾತನಾಡುವುದು ಅಪ್ರಸ್ತುತವಾಗಿದೆ. ಮುಂದಿನ ದಿನಗಳಲ್ಲಿ ದಲಿತ ಸಿಎಂ ಆಗಬೇಕು ಎಂಬ ಬಗ್ಗೆ ಮುಂದೆ ನೋಡೋಣ ಎಂದು ಹೇಳಿದರು.