Sunday, December 22, 2024
Google search engine
Homeಜಿಲ್ಲೆಬೆಳಧರ ಸರ್ಕಾರಿ ಶಾಲೆ ಜಮೀನು ಕಬಳಿಸಲು ಹುನ್ನಾರು - ಆರೋಪ

ಬೆಳಧರ ಸರ್ಕಾರಿ ಶಾಲೆ ಜಮೀನು ಕಬಳಿಸಲು ಹುನ್ನಾರು – ಆರೋಪ

ಬೆಳಧರ ಸರ್ಕಾರಿ ಶಾಲೆ ಉಳಿವಿಗಾಗಿ ಆಗ್ರಹಿಸಿ ಕಾಳಜಿ ಫೌಂಡೇಷನ್ ಮತ್ತು ಭೀಮ್ ಆರ್ಮಿ ಸಂಘಟನೆಯಿಂದ ತುಮಕೂರಿನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಡಾ. ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾ ಪಂಚಾಯತ್ ಕಛೇರಿಯವರೆಗೆ ಮೌನ ಮೆರವಣಿಗೆಯನ್ನು ನಡೆಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತುಮಕೂರು ತಾಲ್ಲೂಕು, ಬೆಳಧರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಹೊಂದಿಕೊಂಡಂತೆ 2 ಎಕರೆ ಜಾಗ ಗ್ರಾಮಠಾಣಾಗೆ ಲಗತ್ತಾಗಿದ್ದು, ರಾಜ್ಯ ಸರ್ಕಾರವು ಮಕ್ಕಳಿಗೆ ಆಟದ ಉದ್ದೇಶಕ್ಕಾಗಿ ಮಂಜೂರು ಮಾಡಿರುವ ಜಾಗವಾಗಿರುತ್ತದೆ. ಈ ಜಾಗಕ್ಕೆ ಸುಮಾರು 4 ಬಾರಿ ಸರ್ವೆ ಕಾರ್ಯ ಮಾಡಿ ಹದ್ದುಬಸ್ತನ್ನು ಸಹ ಮಾಡಲಾಗಿರುತ್ತದೆ. ಆದರೆ ಇತ್ತೀಚೆಗೆ ಸದರಿ ಮೈದಾನವನ್ನು ಬೆಳಧರ ಗ್ರಾಮ ಪಂಚಾಯಿತಿಯಲ್ಲಿ ಶಾಲೆಯ ಹೆಸರಿಗೆ ಈ-ಸ್ವತ್ತನ್ನು ನಮೂದು ಮಾಡಿರುತ್ತಾರೆಂದು ಭೀಮ್ ಆರ್ಮಿ ಸಂಘಟನೆಯ ಜಿಲ್ಲಾದ್ಯಕ್ಷ ಅಯ್ಯನಪಾಳ್ಯ ಶ್ರೀನಿವಾಸ್ ಹೇಳಿದರು.

ಶಾಲಾ ಆಟದ ಮೈದಾನಕ್ಕೆ ಹೊಂದಿಕೊಂಡಂತೆ ಒಂದು ಕಲ್ಯಾಣ ಮಂಟಪವಿದ್ದು ಸದರಿ ಕಲ್ಯಾಣ ಮಂಟಪದ ಮಾಲಿಕರು ಪಂಚಾಯಿತಿಯಲ್ಲಿ ಪಶ್ಚಿಮ ದಿಕ್ಕಿಗೆ ಅನುಮತಿ ಪಡೆದು ಶಾಲೆಯ ಆಟದ ಮೈದಾನವನ್ನು ಕಬಳಿಸುವ ದುರುದ್ದೇಶದಿಂದ ಉತ್ತರಕ್ಕೆ ಬಾಗಿಲನ್ನು ಇಡಲಾಗಿದೆ. ಸದರಿ ಆಟದ ಮೈದಾನವನ್ನೇ ಕಲ್ಯಾಣ ಮಂಟಪದ ವಾಹನ ನಿಲ್ದಾಣವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಕಲ್ಯಾಣ ಮಂಟಪಕ್ಕೆ ಬರುವವರು ಶಾಲಾ ಕೊಠಡಿಗಳ ಆವರಣವನ್ನೇ ಕುಡುಕರ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಪ್ರತಿನಿತ್ಯ ಹಲವಾರು ಮಕ್ಕಳು ಕಲ್ಯಾಣ ಮಂಟಪಕ್ಕೆ ಬಂದು ಹೋಗುವ ವಾಹನಗಳಿಗೆ ಅಡ್ಡಕ್ಕೆ ಸಿಲುಕಿ ಕ್ಷಣ ಮಾತ್ರದಲ್ಲೇ ಪ್ರಾಣಪಾಯದಿಂದ ಪಾರಾದ ನಿದರ್ಶನಗಳು ಇರುತ್ತವೆಂದು ಶ್ರೀನಿವಾಸ್‌ ತಿಳಿಸಿದರು.

ಈ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದ ನಂತರ ಶಾಸಕರು ನಂತರದಲ್ಲಿ ಶಾಲಾ ಮಕ್ಕಳಿಗೆ ಯಾವುದೆ ತೊಂದರೆಯಾಗದಂತೆ ಮಕ್ಕಳ ಹಿತದೃಷ್ಟಿಯಿಂದ ಸದರಿ ಶಾಲೆ ಆಟದ ಮೈದಾನಕ್ಕೆ ತಂತಿ ಬೇಲಿ ನಿರ್ಮಾಣ ಕಾಮಗಾರಿ ಮಾಡುವ ಸಲುವಾಗಿ ಐದು ಲಕ್ಷ ರೂಗಳನ್ನು ಮಂಜೂರು ಮಾಡಿರುತ್ತಾರೆ ಎಂದರು.

ಕಾಮಗಾರಿ ಪ್ರಾರಂಭ ಮಾಡುವ ಮೊದಲು ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಸದರಿ ಶಾಲೆಗೆ ಹದ್ದುಬಸ್ತನ್ನು ಸಹ ಮಾಡಿಕೊಟ್ಟು ಬೌಂಡರಿಗಳನ್ನು ಗುರುತಿಸಿದ್ದಾರೆ. ತಂತಿ ಬೇಲಿ ನಿರ್ಮಿಸುವ ಕಾಮಗಾರಿಗೆ ಕೆಲಸವನ್ನು ಸಹ ಪ್ರಾರಂಭಿಸಿರುತ್ತಾರೆ. ಕಾಮಗಾರಿ ಪ್ರಾರಂಭವಾದಾಗಿನಿಂದ ಸದರಿ ಶಾಲಾ ಆಟದ ಮೈದಾನವನ್ನು ಕಬಳಿಸುವ ದುರುದ್ದೇಶ ಹೊಂದಿರುವ ಕೆಲ ಪ್ರಭಾವಿ ವ್ಯಕ್ತಿಗಳು ಈ ಕಾಮಗಾರಿಗೆ ಒಂದಲ್ಲ ಒಂದು ರೀತಿಯಾಗಿ ತೊಂದರೆ ಕೊಡುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.

ಕೆಲ ಪ್ರಭಾವಿಗಳು ಶಾಲಾ ಆಟದ ಮೈದಾನವನ್ನು ಕಬಳಿಸುವ ದುರುದ್ದೇಶದಿಂದ ಜೆ.ಸಿ.ಬಿ ಯಂತ್ರದಿಂದ ಸದರಿ ತಂತಿ ಬೇಲಿಯನ್ನು ರಾತ್ರೋ ರಾತ್ರಿ ಕಿತ್ತು ಹಾಕಿದ್ದಾರೆಂದು ದೂರಿದ್ದಾರೆ. ಇದರಿಂದ ಶಾಲಾ ಆವರಣದಲ್ಲಿ ಭಯದ ವಾತಾವರಣ ಉಂಟಾಗಿದ್ದು ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡಲು ಭಯಬೀತರಾಗಿದ್ದಾರೆ. ಇದು ಪರೀಕ್ಷಾ ಸಮಯವಾಗಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳಷ್ಟು ತೊಂದರೆಯಾಗುತ್ತದೆ ಎಂದು ದೂರಿದ್ದಾರೆ.

ಪ್ರತಿಭಟನೆಯಲ್ಲಿ ಕಾಳಜಿ ಫೌಂಡೇಷನ್ ಜಿ.ಎಲ್.ನಟರಾಜ್, ಶಿವಕುಮಾರ್, ಚೇತನ್, ಆಕಾಶ್, ನವೀನ್, ರಾಜು, ಹರೀಶ್, ಸೇರಿ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular