ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲವೆ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬೇಕೆಂದು ತುಮಕೂರು ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಮುಖಂಡ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ ಅಸ್ತಿತ್ವದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಟರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅತಿ ಹೆಚ್ಚು ಮತಗಳನ್ನು ಪಡೆದಿದೆ. ಹೀಗಾಗಿ ಕ್ಷೇತ್ರವನ್ನು ಜೆಡಿಎಸ್ ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ.
ಜೆಡಿಎಸ್ ಚುನಾವಣೆಯಲ್ಲಿ ಕೇಸರಿ ಶಾಲು ಧರಿಸಿ ಚುನಾವಣಾ ಪ್ರಚಾರ ಮಾಡಲ್ಲ. ಮಂಡ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅನಿವಾರ್ಯವಾಗಿ ಎಚ್.ಡಿ.ಕುಮಾರಸ್ವಾಮಿ ಕೇಸರಿ ಶಾಲು ಹಾಕಿದ್ದರು. ನಮ್ಮದು ಹಸಿರು ಶಾಲು. ಮೈತ್ರಿ ಮಾಡಿಕೊಂಡಿದ್ದರೂ ಪಕ್ಷದತತ್ವ, ಸಿದ್ದಾಂತಗಳನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಶಾಸಕ ಸಿ.ಬಿ.ಸುರೇಶಬಾಬು ಮಾತನಾಡಿ, ಇಂದಿನ ಸಭೆಯ ತೀರ್ಮಾನದಂತೆ ಜೆಡಿಎಸ್ ಅಭ್ಯರ್ಥಿ ಇಲ್ಲವೇ, ಎರಡು ಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೆಂಬ ಆಶಯವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಲೋಕಸಭಾ ಚುನಾವಣೆಯ ಉಸ್ತುವಾರಿ ಹೊತ್ತಿರುವ ಮಾಜಿ ಸಚಿವ ಗೋಪಾಲಯ್ಯ ಅವರೊಂದಿಗೆ ಕುಳಿತು ಚರ್ಚೆಸಿ ವರಿಷ್ಠರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಾಗುವುದು ಎಂದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಎಸ್.ಆರ್.ಶ್ರೀನಿವಾಸ್ ಮತ್ತು ಚುನಾವಣೆ ನಂತರ ಡಿ.ಸಿ.ಗೌರಿಶಂಕರ್ ಪಕ್ಷ ಬಿಟ್ಟಿದ್ದಾರೆ. ಆದರೆ ಕಾರ್ಯಕರ್ತರು ಪಕ್ಷ ತೊರೆದಿಲ್ಲ. ನಮ್ಮದು ಕಾರ್ಯಕರ್ತರ ಪಕ್ಷ. ಇಂತಹ ಹತ್ತಾರು ನಾಯಕರನ್ನು ಹುಟ್ಟು ಹಾಕುವ ಶಕ್ತಿ ಹೊಂದಿದ್ದಾರೆ. ಬಿಜೆಪಿಯಿಂದ ಜೆ.ಸಿ.ಮಾಧುಸ್ವಾಮಿಗೆ ಟಿಕೇಟ್ ನೀಡದರೆ ಅವರ ಪರವಾಗಿ ಕೆಲಸ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಒಂದು ವೇಳೆ ಜೆಡಿಎಸ್ ಪಕ್ಷಕ್ಕೆ ಅವಕಾಶ ಸಿಕ್ಕರೆ ಮಾಧುಸ್ವಾಮಿ ಸಹ ನಮ್ಮ ಪರವಾಗಿ ಕೆಲಸ ಮಾಡಲಿದ್ದಾರೆ. ಮೈತ್ರಿಧರ್ಮ ಪಾಲಿಸುವುದು ಇಬ್ಬರಿಗು ಅನಿವಾರ್ಯಎಂದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಂಜನಪ್ಪ, ತಿಪಟೂರಿನ ಕೆ.ಟಿ.ಶಾಂತಕುಮಾರ್, ಜೆಡಿಎಸ್ ಮುಖಂಡರಾದ ಕೊಂಡವಾಡಿ ಚಂದ್ರಶೇಖರ್, ಸುಧಾಕರಲಾಲ್, ಗೋವಿಂದರಾಜು, ಜೋತಿಪ್ರಕಾಶ್ ಮಿರ್ಜಿ, ಸೋಲಾರ್ ಕೃಷ್ಣಮೂರ್ತಿ, ಟಿ.ಆರ್.ನಾಗರಾಜು, ವಿಜಯಗೌಡ, ಉಗ್ರೇಶ್, ಎಸ್.ಆರ್.ಗೌಡ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.