ನಾನು ಕೂಡ ಬಿಜೆಪಿ ಟಿಕೇಟ್ ಆಕಾಂಕ್ಷಿ. ಆದರೆ ಟಿಕೇಟ್‌ಗಾಗಿ ಸುಬ್ರಮಣ್ಯಸ್ವಾಮಿಯ ಹಾಗೆ ದೇಶ ಸುತ್ತಲ್ಲ. ಗಣಪತಿಯ ಹಾಗೆಯೇ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಇತಿಹಾಸದಲ್ಲಿಯೇ ಹೊರಗಿನವರು ಬಂದು ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಕೊದಂಡರಾಮಯ್ಯ, ಎ.ಕೃಷ್ಣಪ್ಪ, ದೇವೇಗೌಡರೇ ನಮಗೆ ಸಾಕ್ಷಿ. ಗೆಲ್ಲಬೇಕೆಂಬ ಕಾರಣಕ್ಕೆ ಹೊರಗಿನವರಿಗೆ ಟಿಕೇಟ್ ನೀಡಿದರೆ ಸ್ಥಳೀಯ ನಾಯಕತ್ವ ಬೆಳೆಯುವುದು ಹೇಗೆ? ಎಂದು ಪ್ರಶ್ನಿಸಿದರು.
ರಾಜಕೀಯ ಧ್ರುವೀಕರಣ ಎಂಬುದು 1969ರಲ್ಲೆ ಇಂದಿರಾ ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಆರಂಭವಾದ ದಿನದಿಂದಲೇ ಆರಂಭಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಅಲ್ಲಿಯವರು ಇಲ್ಲಿಗೆ, ಇಲ್ಲಿಯವರು ಅಲ್ಲಿಗೆ ಹೋಗುವುದು ಸಹಜ. ಕೆಲವೊಮ್ಮೆ ನಾವು ನಂಬಿದ್ದ ಸಿದ್ದಾಂತಗಳಿಗೆ ರಾಜೀ ಅನಿವಾರ್ಯ. ಹಾಗೆಂದ ಮಾತ್ರಕ್ಕೆ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಲ್ಲ. ಅನಿವಾರ್ಯವಾದರೆ ಬಿಟ್ಟು ಮನೆಯಲ್ಲಿಯೇ ಇರುತ್ತದೆ ಎಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾತಿಗಣತಿ ಅವೈಜ್ಞಾನಿಕ:
ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸ್ವೀಕರಿಸಿರುವ ಅರ್ಥಿಕ, ಸಾಮಾಜಿಕ ಸಮೀಕ್ಷೆ ಅವೈಜ್ಞಾನಿಕವಾಗಿದೆ. ನಾವೆಲ್ಲರೂ ಮತಾಂತರಗೊಂಡ ಲಿಂಗಾಯಿತರು, ಮೂಲದಲ್ಲಿ ಯಾವುದೋ ಕಸುಬು ಮಾಡುತ್ತಾ ಜೀವನ ಮಾಡುತ್ತಿದ್ದವರು. ನೂರಾರು ವರ್ಷಗಳ ನಂತರ ನೀವು ಮೀಸಲಾತಿಗಾಗಿ ನಿಮ್ಮ ಮೂಲಕ ಜಾತಿಗೆ ಹೋಗಿ ಎನ್ನುವುದಾದರೆ ಹೇಗೆ ಸಾಧ್ಯ ಎಂದರು.
ಅಲ್ಲದೆ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ದೂರುಗಳು ಸಾಕಷ್ಟಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿಯೇ ನಮ್ಮ ಸರ್ಕಾರವಿದ್ದಾಗ ಶೇ18ರಷ್ಟಿದ್ದ ಅವರ ಮೀಸಲಾತಿ ಪ್ರಮಾಣವನ್ನು ಶೇ24ಕ್ಕೆ ಹೆಚ್ಚಳ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು ಎಂದು ಹೇಳಿದರು.