Sunday, September 8, 2024
Google search engine
Homeಮುಖಪುಟಕುಣಿಗಲ್, ಮಾಗಡಿಗೆ ಹೇಮಾವತಿ ನೀರು - ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರೋಧ

ಕುಣಿಗಲ್, ಮಾಗಡಿಗೆ ಹೇಮಾವತಿ ನೀರು – ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರೋಧ

ಕೇವಲ ಒಂದು ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಇಡೀ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಬ್ಬಿಯಿಂದ ಬೈಪಾಸ್ ಮಾಡಿ ಎಕ್ಸ್ಪ್ರೆಸ್ ಕೇನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಲಿದೆ. ಹಾಲಿ ಇರುವ ನಾಲೆಯ ಮೂಲಕ ನಿಗದಿಪಡಿಸಿರುವ ನೀರು ತೆಗೆದುಕೊಂಡು ಹೋಗಲು ನಮ್ಮ ತರಕಾರು ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ನಾನು ಜಿಲ್ಲಾ ಉಸ್ತುವಾರಿ ಜೊತೆಗೆ, ಸಣ್ಣ ನೀರಾವರಿ ಸಚಿವನಾಗಿದ್ದ ವೇಳೆ ಮೇಲ್ಮನೆಯಲ್ಲಿ ಅನುಮೋಧನೆಯಾಗಿದ್ದ ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಕೆ.ಡಿ.ಪಿ.ಸಭೆಯ ಒಕ್ಕೊರಲ ನಿರ್ಣಯದಂತೆ ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೊಗುವ ಎಕ್ಸ್ಪ್ರೆಸ್ ಕೆನಾಲ್ ಯೋಜನೆಯನ್ನು ರದ್ದು ಪಡಿಸಲಾಗಿತ್ತು ಎಂದರು.

ಆದರೆ ಹೊಸ ಸರ್ಕಾರ ಬಂದನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಹಾಗೂ ಕುಣಿಗಲ್ ಕ್ಷೇತ್ರದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಸರ್ವಾಧಿಕಾರಿ ಧೋರಣೆಯಿಂದ ಜಿಲ್ಲೆಯ ಇತರೆ ತಾಲೂಕುಗಳಿಗೆ ಅನ್ಯಾಯವಾಗುವುದನ್ನು ಲೆಕ್ಕಿಸದೆ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ. ಒಂದು ವೇಳೆ ನಮ್ಮ ವಿರೋಧದ ನಡುವೆಯೂ ಯೋಜನೆ ಕೈಗೆತ್ತಿಕೊಂಡರೆ ಅನಿವಾರ್ಯವಾಗಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗುವುದಾಗಿ ಹೇಳಿದರು.

ಹೇಮಾವತಿ ಯೋಜನೆಯಿಂದ ಜಿಲ್ಲೆಗೆ ಹಂಚಿಕೆಯಾಗಿರುವ 24.8 ಟಿ.ಎಂ.ಸಿ ನೀರಿನ ಸಂಪೂರ್ಣ ಬಳಕೆಗೆ ಯೋಜನೆ ರೂಪಿಸಿದ್ದು, ಹೆಚ್ಚುವರಿ ನೀರಿಲ್ಲ. ಹಾಗಿದ್ದ ಮೇಲೆ ಯಾವ ಆಧಾರದಲ್ಲಿ ಈ ಯೋಜನೆ ರೂಪಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಹಲವಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನೀರಿನ ಲಭ್ಯತೆ ಇಲ್ಲದೆ ಸೊರಗುತ್ತಿವೆ. ಬೆಳ್ಳಾವಿ ಏತ ನೀರಾವರಿ ಇನ್ನೂ ಆರಂಭವೇ ಆಗಿಲ್ಲ. ಇಂತಹ ಸಂದರ್ಭದಲ್ಲಿ ಮಧ್ಯದಿಂದ ನಾವು ನೀರು ತೆಗೆದುಕೊಂಡು ಹೋಗುತ್ತವೆ ಎಂದರೆ, ಇದನ್ನು ಜಿಲ್ಲೆಯ ಪ್ರತಿಯೊಬ್ಬರು ಪಕ್ಷಭೇಧ ಮರೆತು ವಿರೋಧಿಸಬೇಕಿದೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರಿಗೂ ಈ ಯೋಜನೆಯ ಬಗ್ಗೆ ಸಹಮತವಿಲ್ಲ. ಆದರೆ ಅವರ ದ್ವನಿಗೆ ಶಕ್ತಿ ಸಾಲದಾಗಿದೆ.ಹೇಮಾವತಿ ನೀರು ನಂಬಿಯೇ ಜಿಲ್ಲೆಯಲ್ಲಿ ನೂರಾರು ಕೋಟಿ ರೂ ಖರ್ಚು ಮಾಡಿ ಜಲಜೀವನ್ ಮೀಷನ್ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕುಣಿಗಲ್ ತಾಲೂಕಿಗೆ ಹೇಮಾವತಿ ಯೋಜನೆಯಲ್ಲಿ 2 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಕುಣಿಗಲ್ ದೊಡ್ಡ ಕೆರೆ, ಮಾರ್ಕೋನಹಳ್ಳಿ ಜಲಾಶಯ ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ. ನಮಗೆ ರಾಜಕೀಯ ಶಕ್ತಿ ಇದೆ ಎಂದು ತಮ್ಮ ಸ್ವಾರ್ಥಕ್ಕೆ ಇಡೀ ಜಿಲ್ಲೆಗೆ ಮೋಸ ಮಾಡುವುದು ಸರಿಯಲ್ಲ. ಸಾಯುವವರೆಗೂ ರಾಜಕಾರಣ ಮಾಡಲು ಸಾಧ್ಯವಿಲ್ಲ. ಇದನ್ನು ಅಧಿಕಾರದಲ್ಲಿರುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular