Thursday, September 19, 2024
Google search engine
Homeಮುಖಪುಟಕೆ.ಬಿ.ಸಿದ್ದಯ್ಯ ಕಾವ್ಯಕ್ಕೆ ವಿಮರ್ಶಾ ಪ್ರಪಂಚ ನ್ಯಾಯ ಒದಗಿಸಿಲ್ಲ - ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ಕೆ.ಬಿ.ಸಿದ್ದಯ್ಯ ಕಾವ್ಯಕ್ಕೆ ವಿಮರ್ಶಾ ಪ್ರಪಂಚ ನ್ಯಾಯ ಒದಗಿಸಿಲ್ಲ – ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

ಇಷ್ಟು ವರ್ಷಗಳ ಕಾಲ ಕೆ.ಬಿ.ಸಿದ್ದಯ್ಯನವರ ಕಾವ್ಯಕ್ಕೆ ಕನ್ನಡ ವಿಮರ್ಶಾ ಪ್ರಪಂಚ ಸರಿಯಾದ ನ್ಯಾಯವನ್ನು ಒದಗಿಸಿಲ್ಲ. ಇದಕ್ಕೆ ಕಾರಣ ಹುಡುಕುವ ಅಗತ್ಯವಿಲ್ಲ. ಕೆ.ಬಿ.ಸಿದ್ದಯ್ಯನವರ ಕಾವ್ಯವನ್ನು ಮುಟ್ಟುವುದು ಬಹಳ ಕಷ್ಟ ಎಂದು ಹಿರಿಯ ಲೇಖಕ ಡಾ.ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.

ಚಲನ ಪ್ರಕಾಶನ ಸಹಕಾರಿ ಮತ್ತು ಕೆ.ಬಿ.ಗೆಳೆಯರ ಬಳಗದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕೆ.ಬಿ.ಸಿದ್ದಯ್ಯ ಅವರ ಹಸ್ತಪ್ರತಿ ಮತ್ತು ಮುದ್ರಣದ ತೊಗಲ ಮಂಟಪ ಖಂಡಕಾವ್ಯವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೆ.ಬಿ.ಸಿದ್ದಯ್ಯನವರ ಕಾವ್ಯದ ಮಾರ್ಗ ಪ್ರಾರಂಭದಿಂದಲೇ ಭಿನ್ನಮಾರ್ಗವನ್ನು ಹಿಡಿದ್ದನ್ನು ನಾವೆಲ್ಲ ಗುರುತಿಸಬಹುದು. ಇವರ ಕಾವ್ಯದ ಬಗ್ಗೆ ವಿಮರ್ಶಕರು ನಿರ್ಲಕ್ಷ್ಯ, ಅಸಡ್ಡೆ ತೋರಿದರು ಎಂದು ವಿಷಾದಿಸಿದರು.

ವಿಮರ್ಶಕ ಡಾ.ರವಿಕುಮಾರ್ ನೀಹ ಅವರು ಕೆ.ಬಿ.ಸಿದ್ದಯ್ಯನವರ ಕಾವ್ಯಕ್ಕೆ ಸರಿಯಾದ ವಿಮರ್ಶೆಯನ್ನು ಬರೆದು ನ್ಯಾಯವನ್ನು, ಪ್ರೀತಿಯನ್ನು, ಗೌರವವನ್ನು ಒದಗಿಸಿದ್ದಾರೆ. ಸಿದ್ದಯ್ಯನವರ ಕಾವ್ಯದ ಬಗ್ಗೆ ಹೆಚ್ಚು ಆಸಕ್ತಿಯಿಂದ ಪುಸ್ತಕವನ್ನೇ ಬರೆದಿದ್ದಾರೆ. ಆ ಪುಸ್ತಕ ಕನ್ನಡ ಸಾಹಿತ್ಯದಲ್ಲಿ ದಲಿತ ಕಾವ್ಯದ ವಿಸ್ತಾರ, ಒಳ-ಹೊರಗನ್ನು ಕುರಿತು ಬರೆದಿದ್ದು, ಅದೊಂದು ಮೈಲಿಗಲ್ಲು ಎಂದರು.

ಸಿದ್ದಯ್ಯನವರ ಕಾವ್ಯ ಸುಡುಸುಡುವ ಮಂಜುಗಡ್ಡೆಯಾಗಿದೆ ಎನ್ನುವುದಕ್ಕೆ ಕಾರಣಗಳಿವೆ. ಆದರೆ ಅವುಗಳನ್ನು ಹುಡುಕಲು ಹೋಗುವುದಿಲ್ಲ. ಕನ್ನಡ ಸಾಹಿತ್ಯದಲ್ಲಿ 70-80ರ ದಶಕವನ್ನು ಬಹಳ ಮುಖ್ಯವಾಗಿ ಕಣ್ಣೆದುರಿನ ಸಾಮಾಜಿಕ, ರಾಜಕೀಯ ಮತ್ತು ಸಾಹಿತ್ಯಕ ಚಿತ್ತದೊಳಗೆ ನಿಜವಾದ ಉತ್ಕ್ರಾಂತಿಯನ್ನು ಮಾಡಿದ ಸಂದರ್ಭ ಎಂದು ನಾವು ಭಾವಿಸಬೇಕು ಎಂದು ಹೇಳಿದರು.

ಬಸವಲಿಂಗಪ್ಪ ಸಾಹಿತಿಯಾಗಿಲ್ಲದ ಕಾರಣದಿಂದ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಿದೆ. ಅವರು ಮಾಡಿದ ಕೆಲವು ಹೇಳಿಕೆಗಳು ಮತ್ತು ಮಹತ್ತರ ಘೋಷಣೆಗೆಳು ಅವು ಸಾಹಿತ್ಯದ ದಿಕ್ಕನ್ನು ಬದಲಾಗುವಂತೆ ಮಾಡಿದವು. ಹಾಗಾಗಿ ಇನ್ನು ಮುಂದಾದರೂ ಸಾಹಿತ್ಯದಲ್ಲಿ ಬಸವಲಿಂಗಪ್ಪ ಅವರ ಹೆಸರನ್ನು ದಾಖಲಿಸಬೇಕಾಗಿದೆ. ಸಾಂಸ್ಕೃತಿಕ, ಸಾಹಿತ್ಯಕ ವ್ಯಕ್ತಿ ಎಂದೇ ಗುರುತಿಸಬೇಕು ಎಂದರು.

ಕಾವ್ಯ ಏಕಕಾಲಕ್ಕೆ ಆಧ್ಯಾತ್ಮಿಕವೂ ರಾಜಕೀಯವೂ ಆಗಿರಬೇಕು ಎಂಬುದು ಕೆ.ಬಿ.ಸಿದ್ದಯ್ಯನವರ ನಿಲುವಾಗಿತ್ತು. ಹಾಗಾಗಿಯೇ ಅವರ ಕಾವ್ಯಕ್ಕೆ ವಿಶೇಷ ಮಹತ್ವ ಸಿಕ್ಕಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಕೊಟ್ಟಶಂಕರ್ ಅವರು ಕೆ.ಬಿ.ಸಿದ್ದಯ್ಯ ಅವರ ಕಾವ್ಯವನ್ನು ಪ್ರಕಟಿಸುವ ಮೂಲಕ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ತೊಗಲು ಮಂಟಪ ಕೃತಿಯನ್ನು ಸಿದ್ದಯ್ಯನವರ ಕೈಬರೆಹದ ಜೊತೆಗೆ ಮುದ್ರಣವನ್ನು ಮಾಡಿಸಿರುವುದು ಮೆಚ್ಚಬೇಕಾದ ಸಂಗತಿ ಎಂದರು.

ಕೆ.ಬಿ.ಸಿದ್ದಯ್ಯನವರ ಬತ್ತಳಿಕೆಯಲ್ಲಿ ಇನ್ನು ಏನೇನು ಇದೆಯೋ ಎಂಬುದನ್ನು ಕೊಟ್ಟಶಂಕರ್ ಹುಡುಕಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಕವಿ ಕೆ.ಬಿ.ಸಿದ್ದಯ್ಯ ಅವರಂಥ ಕೆಲವು ಸಾಹಿತಿಗಳು ಲೋಕವಿರೋಧಿಗಳು. ಸಾಮಾನ್ಯರು ಯೋಚಿಸಿದಂತೆ ಅವರು ಯೋಚಿಸುವುದಿಲ್ಲ. ದಲಿತ, ಹಿಂದುಳಿದವನಾದ ನಾನು ಮುಟ್ಟಿದ್ದರಿಂದಲೇ ಅಕ್ಷರ ಬಿಡುಗಡೆಗೊಂಡಿತು ಎಂದು ಕೆ.ಬಿ.ಸಿದ್ದಯ್ಯ ಹೇಳುತ್ತಾರೆ. ಹೀಗಾಗಿ ಅವರು ಭಿನ್ನವಾಗಿ ಆಲೋಚಿಸುವ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿ.ಎಂ.ಪುಟ್ಟಯ್ಯ, ಕವಯತ್ರಿ ಸವಿತಾ ನಾಗಭೂಷಣ್, ಹಿರಿಯ ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ, ಚರಕ ಆಸ್ಪತ್ರೆಯ ಡಾ.ಬಸವರಾಜು, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಕೊಟ್ಟಶಂಕರ್ ಉಪಸ್ಥಿತರಿದ್ದರು.

ಚೈತ್ರ ಕೊಟ್ಟಶಂಕರ್ ಸ್ವಾಗತಿಸಿದರು. ಡಾ.ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular