Thursday, September 19, 2024
Google search engine
Homeಜಿಲ್ಲೆದರೈಸ್ತ್ರೀ ಪರ ಚಿಂತಕ ಕವಿ ಕೆ.ಬಿ.ಸಿದ್ದಯ್ಯರ ನೆನಪು - ಡಾ.ಶಿವಣ್ಣ ತಿಮ್ಲಾಪುರ

ದರೈಸ್ತ್ರೀ ಪರ ಚಿಂತಕ ಕವಿ ಕೆ.ಬಿ.ಸಿದ್ದಯ್ಯರ ನೆನಪು – ಡಾ.ಶಿವಣ್ಣ ತಿಮ್ಲಾಪುರ

ಖ್ಯಾತ ದಲಿತ ಕವಿ, ಚಿಂತಕ, ಹೋರಾಟಗಾರ ಕೆ.ಬಿ.ಸಿದ್ದಯ್ಯನವರು ತಮ್ಮ ನೇರ ನಡೆ, ನುಡಿ, ಬರೆಹಗಳಿಂದ ನಾಡಿನಾದ್ಯಂತ ಚಿರಪರಿಚಿತರು. ದಲಿತ ಪದಕ್ಕೆ ಜಾತಿಯ ಲೇಪನವಿದ್ದು ಈ ಪದವು ಸಮಸ್ತ ದುಃಖಿತರನ್ನು ಪ್ರತಿಬಿಂಬಿಸುತ್ತದೆ. ಜಗತ್ತಿನ ಎಲ್ಲಾ ದುಃಖಿತರೂ ದಲಿತರೆಂದು ಪರಿಗಣಿಸಿದರೆ ದಲಿತ ಪದಕ್ಕೆ ಜಾಗತಿಕ ಮಹತ್ವ ಬರುತ್ತದೆ ಎಂದು ಹೇಳಿದ ದಲಿತ ಸಂವೇದನೆಯ ಮುಖ್ಯ ಕವಿಗಳಲ್ಲೊಬ್ಬರಾದ ಇವರು, ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ರಾಮಮನೋಹರ ಲೋಹಿಯಾರ ವಿಚಾರಧಾರೆಗಳಿಂದ ಆಕರ್ಷಿತರಾಗಿ ಸಮಾಜವಾದಿ ಹಿನ್ನೆಲೆಯಿಂದ ಚಳವಳಿಗೆ ಧುಮುಕಿದವರು. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಕಂಡ ಜನಪರ ಚಳವಳಿಗಳಾದ ದಲಿತ ಚಳವಳಿ, ರೈತ ಚಳವಳಿ, ಸ್ತ್ರೀ ಚಳವಳಿ ಮತ್ತು ಭಾಷಾ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಮಾತ್ರವಲ್ಲ, ನಾಯಕತ್ವ ವಹಿಸಿದ ಅಪಾರ ಅನುಭವದ ಗಣಿ. ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ, ಅಹಿಂಸಾ ತತ್ವಗಳನ್ನು ಕೇವಲ ಆದರ್ಶಗಳನ್ನಾಗಿ ಸ್ವೀಕರಿಸದೆ, ನಿತ್ಯ ತಮ್ಮ ಬದುಕಿನಲ್ಲಿ ಆಚರಿಸುತ್ತಿದ್ದವರು. ಇವರೇ ಹೇಳುವಂತೆ ‘ಬೆನ್ನ ಹಿಂದೆ ಅಂಬೇಡ್ಕರ್ ಕೂಗಿದ ಕೂತು, ಒಂದು ಅಂಗೈಯಲ್ಲಿ ಗಾಂಧೀಜಿ, ಇನ್ನೊಂದು ಅಂಗೈಯಲ್ಲಿ ಬುದ್ಧ, ಎದುರಿಗೆ ಅಲ್ಲಮಪ್ರಭು, ನಾಲ್ಕು ಮಹಾಜ್ಯೋತಿಗಳ ನಡುವೆ ಹಣತೆ ಧ್ಯಾನಿಸುತ್ತದೆ’ ಎಂದಿದ್ದಾರೆ.

ಕನ್ನಡ ಕಾವ್ಯದ ಮುನಿಯಂತಿದ್ದ ಕೆ.ಬಿ.ಸಿದ್ದಯ್ಯನವರು ನಮ್ಮ ಕಾಲದ ಗುಪ್ತನಿಧಿ. ಆದುದರಿಂದಲೇ ‘ಸೀಮಿತ ಕಾಳಜಿಗಳ, ಪದ್ಯ ರಚನೆಕಾರರು ತುರ್ತು ಮಾರ್ಕೆಟ್ ಸರಕನ್ನು ಸೃಷ್ಟಿಸಿ ಅದೇ ಕಾವ್ಯ ಎನ್ನುವ ಭ್ರಮೆಯ ಬೀಜಗಳನ್ನು ಬಿತ್ತುತ್ತಲಿದ್ದಾರೆ. ಇದು ವೃಥಾ ಹಗರಣವೇ ಸರಿ. ಆದರೆ ಕಾಣಿಯ ಸೋಲದ, ಕಾಣಿಯ ಗೆಲ್ಲದ ವಹಿವಾಟು ಬೇರೆ. ಕೇಬಿ ಕಾವ್ಯ ಕಾಣಿಯ ಸೋಲದ ಕಾಣಿಯ ಗೆಲ್ಲದ ಹಿಡಿದಪ್ಪ ವಹಿವಾಟು’ ಎಂದಿದ್ದಾರೆ. ನಮ್ಮ ನಡುವೆ ಇದ್ದು ಕಾವ್ಯವನ್ನೇ ಹೀರಿಹೋದ ಕಾವ್ಯಪ್ರೇಮಿ ಕಿರಂ ಮೇಷ್ಟ್ರು ಅನುಭಾವಿ ಪರಂಪರೆ ಹಾಗೂ ಬೌದ್ಧ ತಾತ್ವಿಕ ಪರಂಪರೆಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಕೆ.ಬಿ. ಈವರೆಗೆ ಬಕಾಲ, ದಕ್ಲಕಥಾದೇವಿಕಾವ್ಯ, ಅನಾತ್ಮ, ಗಲ್ಲೇಬಾನಿ ಎನ್ನುವ ನಾಲ್ಕು ಖಂಡ ಕಾವ್ಯಗಳನ್ನು, ಅಲ್ಲಮನ ವಚನಗಳ ಸಂಗ್ರಹ, ಹಿರಿಯ ಕವಿ ವೀಚಿಯವರೊಂದಿಗೆ ಸೇರಿ ಬುದ್ದನ ನಾಲ್ಕು ಶ್ರೇಷ್ಟ ಸತ್ಯಗಳು ಕೃತಿಯನ್ನು ಅನುವಾದಿಸಿದ್ದಾರೆ. ಅಲ್ದೆ ಎಚ್.ಗೋವಿಂದಯ್ಯ, ನಟರಾಜ್ ಬೂದಾಳ್ ರೊಂದಿಗೆ ಜೊತೆಗೂಡಿ ದಲಿತ ಕಾವ್ಯ ಸಂಕಲನ, ದಲಿತ ಕಥಾ ಸಂಕಲನ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕತ್ತಲೊಡನೆ ಮಾತುಕತೆ ಆರಂಭಿಸಿ ಗಟ್ಟಿಯಾದ ಿವರ ಬರೆಹ ಕತ್ತಲನ್ನು ಮೀರಿ ಕತ್ತಲಲ್ಲಿದ್ದವರಿಗೆ ಬೆಳಕಿನ ಬುಗ್ಗೆಯ ಪರಂಜ್ಯೋತಿಯಾಯ್ತು. ಅಂಬೇಡ್ಕರ್ ಕೂಗಿದ ಕೂಗಿಗೆ ಎಚ್ಚರಗೊಂಡ ಕೆ.ಬಿ. ದಲಿತ ಮತ್ತು ರೈತ ಸಂಘಟನೆಯ ಚಳವಳಿಗಳನ್ನು ಯು.ಆರ್.ಅನಂತಮೂರ್ತಿ, ತೇಜಸ್ವಿ, ಎಂ.ಡಿ.ನಂಜುಂಡಸ್ವಾಮಿ, ಕೆ.ರಾಮದಾಸ್, ಪ್ರೊ.ಬಿ.ಕೃಷ್ಣಪ್ಪ ಮತ್ತು ದೇವನೂರು ಮಹಾದೇವರ ಪ್ರಭಾವ ಮತ್ತು ಒಡನಾಟದಿಂದ ಚಳವಳಿಯನ್ನು ತಾತ್ವಿಕವಾಗಿ, ಭಾವನಾತ್ಮಕವಾಗಿ ಸಂಘಟಿಸುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದವರು. ಅಂಬೇಡ್ಕರ್ ರಷ್ಟೇ ಗಾಂಧೀಜಿ ಕೂಡ ಇವರನ್ನು ಪ್ರಭಾವಿಸಿದ್ದಾರೆ. ಗಾಂಧಿ ಬಗ್ಗೆ ಇವರಿಗಿದ್ದ ಗ್ರಹಿಕೆ ಎಷ್ಟರಮಟ್ಟಿಗೆ ಇತ್ತು ಎಂದರೆ ತಮ್ಮ ಬರವಣಿಗೆ ಮತ್ತು ಭಾಷಣಗಳಲ್ಲಿ ಎಲ್ಲಿಯೂ ಕೂಡ ಅಂಬೇಡ್ಕರ್ ಮತ್ತು ಗಾಂಧೀಯನ್ನು ಪರಸ್ಪರ ವಿರೋಧಿಗಳಂತೆ ಕಂಡಿದ್ದು ಇಲ್ಲವೇ ಇಲ್ಲ. ಗಾಂಧಿಯನ್ನು ತಮ್ಮ ತಲೆಯಲ್ಲಿ ಭಾವನಾತ್ಮಕವಾಗಿ ತುಂಬಿಕೊಂಡು ಅಂಬೇಡ್ಕರ್ ರನ್ನು ನೋಡುವುದು, ಅಂಬೇಡ್ಕರ್ ರನ್ನು ತಮ್ಮ ತಲೆಯಲ್ಲಿ ಭಾವನಾತ್ಮಕವಾಗಿ ತುಂಬಿಕೊಂಡು ಗಾಂಧಿಯನ್ನು ನೋಡುವುದು ಈ ಎರಡು ದೃಷ್ಟಿಕೋನಗಳು ಅಪಾಯಕಾರಿ ಎಂದು ಸ್ಪಷ್ಟವಾಗಿ ನಂಬಿದ್ದವರು.

ಪರ್ಯಾಯ ರಾಜಕಾರಣದ ಚಿಂತನೆಯಿಂದ ದಲಿತ, ರೈತ ಮತ್ತು ಸ್ತ್ರೀ ಸಂಘಟನೆಗಳು ರಾಜಕೀಯ ಶಕ್ತಿಯಾಗಿ ಒಂದುಗೂಡಬೇಕೆಂಬುದು ಕೆ.ಬಿ.ಯವರ ಕನಸು. ಆ ಕಾರಣಕ್ಕಾಗಿಯೇ ದೇಶದಲ್ಲಿಯೇ ಮೊಟ್ಟಮೊದಲಿಗೆ ದರೈಸ್ತ್ರೀ ಪರ ಹೋರಾಟಗಾರರಿಗಾಗಿ ಸಾಂಸ್ಕೃತಿಕ ಪ್ರಶಸ್ತಿಯನ್ನು ಹುಟ್ಟುಹಾಕಿ ಮೊದಲಿಗೆ ಅಂದಿನ ಉಪಮುಖ್ಯಮಂತ್ರಿಗಳು ಮತ್ತು ಈಗಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ, ಡಾ.ಯು.ಆರ್.ಅನಂತಮೂರ್ತಿಯವರಿಂದ ಪ್ರದಾನ ಮಾಡಿಸಿದ್ದರು. ಅಂದಿನ ಕಾರ್ಯಕ್ರಮಕ್ಕೆ ನ್ಯಾಯವಾದಿ ರವಿವರ್ಮಕುಮಾರ್, ಇಂದಿನ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಸಾಕ್ಷಿಯಾಗಿದ್ದರು. ಅಹಿಂದ ರಾಜಕೀಯ ಸಂಘಟನೆಯಂತೆ ದರೈಸ್ತ್ರೀಯನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಆಲೋಚನೆಯ ಕನಸು ಕಂಡಿದ್ದವರು ಕೇಬಿ.

ಇವರು ವೇದಿಕೆ ಹತ್ತಿ ಮಾತಿಗಿಳಿದರೆ ಸಾಕು ಸಭಿಕರು ಸದ್ದುಗದ್ದಲಗಳಿಂದ ಹೊರಬಂದು ಮೂಕವಿಸ್ಮಿತರಾಗಿ ಇವರ ಮಾತುಗಳನ್ನು ಆಲಿಸುತ್ತಿದ್ದರು. ಅಂತಹ ಮಾಂತ್ರಿಕ ಶಕ್ತಿ ಕೆ.ಬಿ.ಯವರ ಮಾತುಗಳಿಗೆ ಇತ್ತು ಎನ್ನುವುದು ಒಂದು ವಿಶೇಷ. ಒಂದೇ ಜಾತಿಯ ಅತಿಥಿಗಳು ವೇದಿಕೆಯ ಮೇಲಿಲ್ಲದಂತೆ ಎಚ್ಚರ ವಹಿಸುತ್ತಿದ್ದುದು ಇವರ ಜಾತ್ಯತೀತ ಮನಸ್ಥಿತಿಗೆ ಹಿಡಿದ ಕನ್ನಡಿ. ಜೊತೆಗೆ ಆ ವೇದಿಕೆಯಲ್ಲಿ ಸ್ತ್ರೀಯರ ಉಪಸ್ಥಿತಿ ಇಲ್ಲದಿದ್ದರೆ ಆ ವೇದಿಕೆ ಅಪೂರ್ಣ ಎಂದು ಪದೇಪದೇ ಹೇಳುತ್ತಿದ್ದುದೂ ಉಂಟು. ಸ್ತ್ರೀ ಸಂಕಟದ ಮುಂದೆ ಇನ್ನು ಸಂಕಟ ಉಂಟೆ ಎಂದು ಎಚ್ಚರಿಸುವ ಮೂಲಕ ಸಾಮಾಜಿಕ ನ್ಯಾಯದ ವಕ್ತಾರರಾಗಿಬಿಡುತ್ತಿದ್ದರು ಅವರ ಸ್ತ್ರೀಪರ ಕಾಳಜಿಯನ್ನು ತೋರಿಸುತ್ತದೆ.

‘ಈ ದೇಹ ನನ್ನ ದೇಹ ಇಡೀ ದೇಹ, ಮುಟ್ಟಬಾರದೆಂದು ಕೇಳಿ, ಕೇಳಿ ಕೇಳಿ ಕಟ್ಟಕಡೆಗೆ, ಮುಟ್ಟಬೇಕೆಂದು ಅರಿತು, ಕಾಯವನ್ನು ಕಾಯಕದಿಂದ ವಿಸರ್ಜಿಸಿದೆ, ಮಲಮೂತ್ರ ವಿಸರ್ಜಿಸಿದಂತೆ ‘ ಎನ್ನುವ ಕೇಬಿ ಈಗ ಅ ಆ ಮಂಟಪದಲ್ಲಿ ಚಿರನಿದ್ರೆಯಲ್ಲಿದ್ದಾರೆ. ಶೋಷಿತರ ಪರವಾದ ಗಟ್ಟಿ ದನಿಯೊಂದು ಇಲ್ಲವಾಗಿದೆ. ಈಗ ಅವರ ನೆನಪು ಮಾತ್ರ.

ಮಾರ್ಚು 4, 1954 ಅವರ ಜನ್ಮದಿನ. ಕೆ.ಬಿ.ಸಿದ್ದಯ್ಯನವರ ಜನ್ಮದಿನದ ನೆನಪಿಗಾಗಿ ಮಾರ್ಚ್ 3ರಂದು ತುಮಕೂರಿನ ಕೆ.ಬಿ. ಸಿದ್ದಯ್ಯನವರ ಬಳಗ ಅವರ ಅಪ್ರಕಟಿತ ಕೊನೆಯ ಖಂಡ ಕಾವ್ಯ ಬರೆಹ ‘ತೊಗಲ ಮಂಟಪ’ ಅವರ ಹಸ್ತಾಕ್ಷರದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವುದು ಕಾವ್ಯಾಸಕ್ತರು ಮತ್ತು ಜನಪರ ಚಳವಳಿ ಸಖರ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.

ಡಾ. ಶಿವಣ್ಣ ತಿಮ್ಲಾಪುರ, ಲೇಖಕರು, ತುಮಕೂರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular