Sunday, September 8, 2024
Google search engine
Homeಚಳುವಳಿಸಂಸತ್ತಿನಲ್ಲಿ ರಾಜಕೀಯ ನಾಯಕತ್ವ ಮಾತನಾಡುತ್ತಿಲ್ಲ - ಚಿಂತಕ ಕೆ.ದೊರೈರಾಜ್

ಸಂಸತ್ತಿನಲ್ಲಿ ರಾಜಕೀಯ ನಾಯಕತ್ವ ಮಾತನಾಡುತ್ತಿಲ್ಲ – ಚಿಂತಕ ಕೆ.ದೊರೈರಾಜ್

ಪ್ರಜಾಪ್ರಭುತ್ವದಲ್ಲಿ ಯಾವ ಸಮುದಾಯಕ್ಕೆ ನಾಯಕತ್ವ ಸಿಗುವುದಿಲ್ಲವೋ ಆ ಸಮುದಾಯಕ್ಕೆ ಸಂವಿಧಾನಿಕ ನ್ಯಾಯವೂ ಸಿಗುವುದಿಲ್ಲ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.

ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ದಸಂಸ 50 ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸತ್ ನಲ್ಲಿ ಜನರು ಮಾತನಾಡಿ ಎಂದು ಕಳಿಸಿದ್ದರೆ ಐದು ವರ್ಷ ಏನೂ ಮಾತನಾಡದ ಮೌನವಾಗಿ ಕಾಲ ಕಳೆದು ಬಂದಿದ್ದಾರೆ. ಹಿಂದುಳಿದವರಿಗೆ, ಕೆಳಜಾತಿಯವರಿಗೆ ರಾಜಕೀಯ ನಾಯಕತ್ವ ಬೇಕು. ಆ ರಾಜಕೀಯ ನಾಯಕತ್ವ ಮಾತನಾಡಬೇಕು. ಆ ಜನರಿಗಾಗಿ ಕೆಲಸ ಮಾಡಬೇಕು. ಈ ಜನಸಮುದಾಯ ಕುರಿತು ಮಾತನಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ದಸಂಸ ಐವತ್ತು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕೇವಲ ಸಂಭ್ರಮಪಟ್ಟರೆ ಸಾಲದು. ಇಷ್ಟು ವರ್ಷಗಳ ಕಾಲ ದಸಂಸ ಬೆಳವಣಿಗೆಗೆ ಕಾರಣಕರ್ತರಾದ ಮಹನೀಯರನ್ನು ಸ್ಮರಿಸಬೇಕಾಗಿದೆ ಪ್ರೊ.ಬಿ.ಕೃಷ್ಣಪ್ಪ, ಹರವೆಯವರು, ತ್ಯಾಗಿ, ಸಿದ್ದಲಿಂಗಯ್ಯ ದಲಿತ ಸಂಘರ್ಷ ಸಮಿತಿ ಕಟ್ಟಲು ಶ್ರಮಿಸಿದರು. ಜಿಲ್ಲಾ ಮಟ್ಟದಲ್ಲೂ ಹಲವರ ಶ್ರಮಸ್ಮರಿಸಬೇಕು.

ದಲಿತ ಸಂಘರ್ಷ ಸಮಿತಿ ಮತ್ತು ಅದರ ಹೋರಾಟಗಳ ಕುರಿತು ಎಲ್ಲಿಯೂ ಮೌಲ್ಯಮಾಪನ ನಡೆದಿಲ್ಲ. ದಲಿತ ಸಂಘರ್ಷ ಸಮಿತಿಯ ಬಗ್ಗೆ ಅವರು ಹಾಗೆ ಹೇಳಿದರು. ಇವರು ಹೀಗೆ ಹೇಳಿದರು ಎಂಬ ಬಗ್ಗೆ ಪ್ರಚಾರ ನಡೆಯಿತೇ ಹೊರತು. ಹೋರಾಟದ ಮೌಲ್ಯಗಳು ಕುರಿತು ಮೌಲ್ಯಮಾಪನ ನಡೆದಿಲ್ಲ.

ದಲಿತ ಸಂಘರ್ಷ ಸಮಿತಿಯ ಐವತ್ತು ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದೇವೆಯೋ ಇದು ಸವಾಲು ಆಗಬೇಕು. ಈ ಸಂಭ್ರಮ ಬರೀ ಸಂಭ್ರಮವಾಗಿ ಇಲ್ಲಿಯೇ ಮರೆತು ಬಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಸಂಭ್ರಮ ವರ್ತಮಾನದಲ್ಲಿ ಏನಾಗುತ್ತಿದೆ. ಮುಂದೆ ಏನಾಗಭೇಕು ಎಂಬ ಬಗ್ಗೆ ಆಲೋಚನೆಗಳನ್ನು ಬೆಳೆಸಬೇಕಾಗಿದೆ. ಭವಿಷ್ಯ ಹೆಚ್ಚು ಆತಂಕವಿದೆ ಎಂಬ ಬಗ್ಗೆ ಬೆಳಕು ಚೆಲ್ಲಬೇಕು ಎಂದರು.

ಹೋರಾಟ ವ್ಯಕ್ತಿ ಕೇಂದ್ರಿತ, ಜಾತಿ ಕೇಂದ್ರಿತವಾಗದೆ ವಿಚಾರ ಕೇಂದ್ರಿತ ಆದರೆ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜಾತಿ, ವ್ಯಕ್ತಿ ಕೇಂದ್ರಿತವಾಗಿರುವುದರಿಂದ ಸಂಘಟನೆ ಛಿದ್ರಛಿದ್ರವಾಗಿದೆ. ನಾವು ಯಾವುದೇ ರಾಗ, ದ್ವೇಷಗಳಿಲ್ಲದೆ ಎಲ್ಲಾ ಜಾತಿ ಜನರನ್ನು ಒಳಗೊಂಡಂತೆ ಸಮತೆಯ ಸಮಾಜವನ್ನು ಕಟ್ಟಬೇಕು. ಹೋರಾಟ ಮಾಡಬೇಕು. ಹೀಗೆ ಒಗ್ಗೂಡದೆ ಹೋದರೆ ಸಂಘಟನೆ ಬಲಹೀನವಾಗುತ್ತದೆ.

ನಮ್ಮ ಶಕ್ತಿಯನ್ನು ಜಾಸ್ತಿ ಮಾಡಿಕೊಂಡು ಅಂಬೇಡ್ಕರ್ ಹೇಳಿದಂತಹ ಸಮತೆಯ ಸಮಾಜವನ್ನು ಕಟ್ಟಬೇಕು. ಛಿದ್ರೀಕರಣವಾಗುವುದನ್ನು ತಪ್ಪಿಸಬೇಕು. ಯಾರಲ್ಲಿ ದ್ವೇಷ ಭಾವನೆ ಇರುತ್ತದೆ. ಯಾರು ಬೇಧಭಾವ ಮಾಡುತ್ತಾರೆ. ಅವರು ಮನುಷ್ಯರೇ ಅಲ್ಲ. ಇಂತಹ ಸಂದರ್ಭದಲ್ಲಿ ಛಿದ್ರೀಕರಣಕ್ಕೆ ಒಳಗಾಗದೆ ನಾವು ಒಗ್ಗೂಡಿ ಮುನ್ನಡೆಯಬೇಕಿದೆ ಎಂದರು.

ಇಂದಿನ ಯುವಪೀಳಿಗೆ ವೈದಿಕಶಾಹಿ, ಬಂಡವಾಳಶಾಹಿ ಬಲಗೆ ಬೀಳದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಯುವ ಪೀಳಿಗೆಯಲ್ಲಿ ಬೌದ್ಧಿಕ ವಿಸ್ತಾರವನ್ನು ಉಂಟುಮಾಡಬೇಕು. ಎಲ್ಲ ಮಹನೀಯರ ವಿಚಾರಗಳನ್ನು ತಿಳಿದುಕೊಂಡು ನಾವು ಬೌದ್ಧಿಕವಾಗಿ ವಿಕಾಸಗೊಂಡು ವ್ಯವಹರಿಸಬೇಕು. ಬೌದ್ಧಿಕ ಸಾಮರ್ಥ್ಯ ಇಲ್ಲದಿದ್ದರೆ ಈ ದೇಶವನ್ನು ಆಳ್ವಿಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾವು ಬೌದ್ಧಿಕವಾಗಿ ವಿಸ್ತಾರ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಾನವೀಯ ವಿಚಾರಗಳನ್ನು ತಿಳಿದುಕೊಂಡು ಎಲ್ಲಾ ಜಾತಿ ಸಮುದಾಯಗಳನ್ನು ಒಟ್ಟುಗೂಡಿಸಿ ಸಮಾನತೆಗೆ ತುಡಿಯುವಂತಹ ಯಾವುದೇ ದ್ವೇಷವಿಲ್ಲದೆ, ಒಟ್ಟುಗೂಡಿಸಿಕೊಂಡು ಹೋಗುವಂತಹ ನಾಯಕತ್ವ ನಮಗೆ ಬೇಕಿದೆ. ಇವೊತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈ ಕಾಲಘಟ್ಟದಲ್ಲಿ ವೈದಿಕಶಾಹಿ ಮತ್ತು ಬಂಡವಾಳಶಾಹಿಯನ್ನು ಅರ್ಥಮಾಡಿಕೊಂಡು ಸದ್ಯದ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಬಸವರಾಜು ಪ್ರಾಸ್ತಾವಿಕ ಮಾತನಾಡಿದರು. ಸಿ.ಜಿ.ಲಕ್ಷ್ಮೀಪತಿ, ಡಾ.ರವಿಕುಮಾರ್ ನೀಹ, ವಿ.ಎಲ್.ನರಸಿಂಹಮೂರ್ತಿ, ಗುರುಪ್ರಸಾದ್ ಕಂಟಲಗೆರೆ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular