Friday, December 27, 2024
Google search engine
Homeಚಳುವಳಿಸಮಾಜದಲ್ಲಿ ಇಂದಿಗೂ ಶೋಷಣೆ ನಿಂತಿಲ್ಲ - ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಳವಳ

ಸಮಾಜದಲ್ಲಿ ಇಂದಿಗೂ ಶೋಷಣೆ ನಿಂತಿಲ್ಲ – ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಳವಳ

ಹಲವು ಹೋರಾಟಗಳು ನಡೆದರೂ ಇನ್ನೂ ಶೋಷಣೆ ನಿಂತಿಲ್ಲ. ಶೋಷಣೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇದನ್ನು ತೊಡೆದು ಹಾಕಲು ಹೋರಾಟವನ್ನು ಮುಂದುವರೆಸಬೇಕಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ತುಮಕೂರಿನ ಎಂಪ್ರೆಸ್ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಸಂಸ 50 ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಶೋಷಣೆಗಳು ನಡೆಯುತ್ತಲೇ ಇದೆ. ಶೋಷಣೆಗೆ ಅಂತ್ಯ ಕಾಣುವಂತಹ ಯುವಕರನ್ನು ಹೆಚ್ಚು ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ನಡೆಯುತ್ತಿರುವ ಶೋಷಣೆಯನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಕೊಟ್ಟಂತಹ ಮಹತ್ವವನ್ನು ನಾವು ಕೊಡಬೇಕಾಗಿದೆ. ಶಿಕ್ಷಣ ಕೊಟ್ಟರೆ ಸಮಾಜದಲ್ಲಿ ಬದಲಾವಣೆ ಸಾಧ್ಯ. ಆಗ ಮಾತ್ರ ಹೋರಾಟಗಳಿಗೆ ಒಂದು ದಿಕ್ಸೂಚಿ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಷಣವನ್ನು ಕೇಳಿ ಹೋದರೆ ಸಾಲದು. ಅದನ್ನು ಮನನ ಮಾಡಿಕೊಂಡು ಸಮಾಜದಲ್ಲಿನ ಹಸಿವು, ಅಪಮಾನ ಇವುಗಳನ್ನು ತೊಡೆದು ಹಾಕಲು ಮುಂದಾಗಬೇಕು. ಆ ಮೂಲಕ ಸಮಾಜದಲ್ಲಿನ ಶೋಷಣೆಯನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಹೇಳಿದರು.

ಶೋಷಣೆಗೆ ಒಳಗಾಗುವಂತಹ ಮನಸ್ಥಿಯ ಜನ ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಶೋಷಣೆ ಮಾಡುವಂತಹ ಜನರು ಇರುತ್ತಾರೆ. ಇದರಿಂದ ಹೊರಬರಬೇಕಾದರೆ ಶಿಕ್ಷಣ ಪಡೆಯಬೇಕು. ಸಂಘಟನೆಯಾಗಬೇಕು. ಹೋರಾಟ ಮಾಡಬೇಕು. ಇದರ ಜೊತೆಗೆ ನಮ್ಮಲ್ಲಿರುವ ಕೀಳರಿಮೆಯನ್ನು ಬಿಡಬೇಕು ಎಂದು ವಿವರಿಸಿದರು.

ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಹಾಗೆಯೇ ಹಸಿವು ಇರಬಾರದು. ಹಸಿವು ಮುಕ್ತ ವಾತಾವರಣ ನಿರ್ಮಾಣವಾದರೆ ಶಿಕ್ಷಣ ಪಡೆಯಲು ಸಾಧ್ಯ. ಸ್ವಾಭಿಮಾನ ಬೆಳೆಸಿಕೊಂಡು ಮುನ್ನಡೆಯಬೇಕು. ಸಮಾಜದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ ಎನ್ನುವುದನ್ನು ಯಾರೂ ಒಪ್ಪಬಾರದು. ಯಾಕೆಂದರೆ ನಾವ್ಯಾಕೆ ಕೆಳವರ್ಗ ಅಂತ ಕರೆದುಕೊಳ್ಳಬೇಕು. ಅದರ ಬದಲು ಹಿಂದುಳಿದ ಮತ್ತು ತಳಸಮುದಾಯ ಎಂದರೆ ಅದು ಸೂಕ್ತವಾದ ಪದ ಎಂದು ಹೇಳಿದರು.

ರಾಜಕೀಯ ಆಧಿಕಾರವಿಲ್ಲದೆ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಹಾಗಾಗಿ ದಲಿತರು ರಾಜಕೀಯ ಅಧಿಕಾರ ಹಿಡಿಯಲು ಮುಂದಾಗಬೇಕು ಎಂದರು.

ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಪುಸ್ತಕ ಬಿಡುಗಡೆ ಮಾಡಿದರು. ಕೋಟಿಗಾನಹಳ್ಳಿ ರಾಮಯ್ಯ, ಕವಿ ಸುಬ್ಬು ಹೊಲೆಯಾರ್ ಮಾತನಾಡಿದರು. ಹೋರಾಟಗಾರರಾದ ಬೆಲ್ಲದಮಡುಗು ಕೃಷ್ಣಪ್ಪ, ಗಂಗಾಧರಪ್ಪ, ಗಂಗಮ್ಮ ಎಂ.ಎಸ್.ಕೆಂಪಯ್ಯ, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ ಇದ್ದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಗಂಗಾಧರ್, ನರಸೀಯಪ್ಪ, ಎನ್.ಜಿ.ರಾಮಚಂದ್ರ, ಸಿಂಗದಹಳ್ಳಿ ರಾಜ್ ಕುಮಾರ್, ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular